ವರದಿ ತಲುಪಿಸುವ ವೇಗಕ್ಕಿಂತ ನಿಖರತೆ ಮುಖ್ಯಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ  ಆಶಯ

0
36

ಮಂಗಳೂರು : ವರದಿಯನ್ನು ತಲುಪಿಸುವ ವೇಗಕ್ಕಿಂತ ನಿಖರತೆ ಮುಖ್ಯ.ಯಾವುದೇ ಸಮಸ್ಯೆಗಳ ಸಂದರ್ಭ ಸಮಾಜದಲ್ಲಿ ಸಮತೋಲನ ಕಾಯ್ದುಕೊಳ್ಳುವುದಕ್ಕಿಂತಲೂ ಸತ್ಯವನ್ನು ಎತ್ತಿ ತೋರಿಸುವುದು ಪ್ರಮುಖವಾಗಬೇಕು. ಸುದ್ದಿಯಲ್ಲಿ ಸಮತೋಲನ
 ಕಾಯ್ದುಕೊಳ್ಳುವ ಉದ್ದೇಶದಿಂದ ಆರೋಪಿ ಮತ್ತು ಸಂತ್ರಸ್ತರನ್ನು ಒಂದೇ ಆಗಿ ಪರಿಗಣಿಸಬಾರದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಪತ್ರಕರ್ತ ವಿಜಯ ಕೋಟ್ಯಾನ್ ಅವರಿಗೆ ಪ್ರಸಕ್ತ ಸಾಲಿನ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ಪತ್ರಿಕೋದ್ಯಮದ ಹೃದಯ ಬಡಿತವೇ ನಿರ್ಭೀತ ವರದಿಗಾರಿಕೆ. ನಿರ್ಭೀತ ವರದಿಗಾರಿಕೆ ಇಲ್ಲದ ಪತ್ರಿಕೋದ್ಯಮ ಅರ್ಥಹೀನ ’ಎಂದರು.
ಮಂಗಳೂರಿನ ಸಾಮುದಾಯಿಕ ರಚನೆ ಅತ್ಯಂತ ಸೂಕ್ಷ್ಮವಾಗಿದೆ. ಸತ್ಯಕ್ಕಿಂತ ಸುಳ್ಳು ಅತ್ಯಂತ ವೇಗವಾಗಿ ವ್ಯಾಪಿಸುತ್ತದೆ. ಸತ್ಯ ಒಂದು ಗಂಟೆಯಲ್ಲಿ ಪ್ರಯಾಣಿಸಿದರೆ, ಸುಳ್ಳು ಅರ್ಧ ಸೆಕೆಂಡ್‌ನಲ್ಲಿ ರವಾನೆಯಾಗುತ್ತದೆ. ಇಲ್ಲಿನ ಶೇ. 98 ಜನರಿಗೆ ಶೇ. 2ರಷ್ಟು ಎಂದು ಮಂದಿಯಿಂದ ಆಗುತ್ತಿರುವ ಸಮಸ್ಯೆ ಒಂದು ರೀತಿಯ ರೋಗವಾಗಿದೆ. ಇದನ್ನು ಪತ್ರಿಕೋದ್ಯಮದ ಮೂಲಕವೂ ಗುಣಪಡಿಸಬಹುದು ಎಂದು ಅವರು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಷಾ, ಹಿರಿಯ ಪತ್ರಕರ್ತ ಆನಂದ ಶೆಟ್ಟಿ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ , ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here