ಮಂಗಳೂರು : ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಹತ್ವದ ಯಶಸ್ಸು ಸಾಧಿಸಿದ್ದು, ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಆರೋಪಿ **ಉಮ್ಮರ್ ಫಾರೂಕ್ ಎಂ.ಆರ್.**ನನ್ನು ಕೇರಳದ ಕೊಚ್ಚಿಯಲ್ಲಿ ಬಂಧಿಸಿದೆ. ಈ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಎನ್‌ಐಎ ಮಾಹಿತಿ ಪ್ರಕಾರ, ಉಮ್ಮರ್ ಫಾರೂಕ್ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಹಾಗೂ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿತ್ತು. ಆತನ ಬಂಧನಕ್ಕೆ ₹4 ಲಕ್ಷ ಬಹುಮಾನ ಕೂಡ ಘೋಷಿಸಲಾಗಿತ್ತು.
ತನಿಖೆಯ ಪ್ರಕಾರ, ನಿಷೇಧಿತ ಪಿಎಫ್‌ಐ (PFI) ಸಂಘಟನೆಯ ಕಚೇರಿಯಲ್ಲಿ ನಡೆದ ಸಂಚು ಸಭೆಯಲ್ಲಿ ಉಮ್ಮರ್ ಫಾರೂಕ್ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಅಲ್ಲದೆ, ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳಿಗೆ ಬಳಸಲು ಬೈಕ್ ಒದಗಿಸಿದ್ದ ಆರೋಪವೂ ಆತನ ಮೇಲಿದೆ.
ಹತ್ಯೆ ನಡೆದ ಬಳಿಕ ಪ್ರಮುಖ ಆರೋಪಿಗಳಿಗೆ ಪರಾರಿಯಾಗಲು ನೆರವು ನೀಡಿರುವುದು, ಜೊತೆಗೆ ಪ್ರಕರಣದ ಸಾಕ್ಷಿದಾರನ ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲೂ ಆತನ ಪಾತ್ರವಿದೆ ಎಂದು ಎನ್‌ಐಎ ಆರೋಪಿಸಿದೆ.
ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಉಮ್ಮರ್ ಫಾರೂಕ್ ಕೇರಳದ ಕೊಚ್ಚಿಗೆ ಪರಾರಿಯಾಗಿದ್ದನು. ನಿಷೇಧಿತ ಪಿಎಫ್‌ಐ ಸಂಘಟನೆಯ ಕೆಲ ಪ್ರಮುಖರ ನೆರವಿನಿಂದ ಕಳೆದ ನಾಲ್ಕು ವರ್ಷಗಳಿಂದ ವಿವಿಧ ಸ್ಥಳಗಳಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಕಳೆದ ಜುಲೈ 11ರಂದು ಎನ್‌ಐಎ ಅಧಿಕಾರಿಗಳು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನೌಷಾದ್ ಹಾಗೂ ನಸೀರ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಅವರ ವಿಚಾರಣೆಯಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಕೊಚ್ಚಿಯಲ್ಲಿನ ಅಡಗುತಾಣವನ್ನು ಪತ್ತೆಹಚ್ಚಿ ವಿಶೇಷ ಕಾರ್ಯಾಚರಣೆ ನಡೆಸಿದ ಎನ್‌ಐಎ ಅಧಿಕಾರಿಗಳು ಉಮ್ಮರ್ ಫಾರೂಕ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಎನ್‌ಐಎ ಅಧಿಕಾರಿಗಳು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

