ಉಡುಪಿ: ಹಾವಂಜೆ ಗ್ರಾಮದ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಜೂನ್ 21ರಂದು ನಡೆದ ಕೊರಗಜ್ಜ ದೈವದ ಕೋಲ ಸೇವೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರು, ಸಮಾಜಸೇವಕರು, ಕೃಷಿಕರು ಹಾಗೂ ದೈವ ನರ್ತಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕ್ಷೇತ್ರದ ಧರ್ಮದರ್ಶಿಗಳಾದ ಭರತ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಹಲವು ಧಾರ್ಮಿಕ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದವರು ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡ ಸಾಧಕರಿಗೆ ಅಭಿನಂದನೆ ಸಲ್ಲಿಸಲಾಯಿತು.
ಪ್ರಖ್ಯಾತ ದೈವ ನರ್ತಕರಾದ ಸುಕೇಶ್ ಬಂಗೇರ ಗೋಳಿಕಟ್ಟೆ, ಸಮಾಜಸೇವಕರಾದ ಸತೀಶ್ ಪೂಜಾರಿ ಕೀಳಂಜೆ, ವಿನೋದ್ ಶೆಟ್ಟಿ (ಸಂಸ್ಥಾಪಕ ಅಧ್ಯಕ್ಷರು, ಅಖಿಲ ಭಾರತ ದೈವರಾಧಕರ ಒಕ್ಕೂಟ (ರಿ) ಕೇಂದ್ರೀಯ ಉಡುಪಿ ಜಿಲ್ಲೆ ಹಾಗೂ ಪ್ರವರ್ತಕರು ನಮ್ಮ ಉಡುಪಿ ಟಿವಿ), ಕೃಷಿಕರಾದ ಇಸಾಬೆಲ್ಲ ಡೇಸಾ ಹಾಗೂ ಕೃಷ್ಣ ಪೂಜಾರಿ ಅಂಜಾರು ಸೇರಿದಂತೆ ಹಲವು ಗಣ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಕಾರ್ಯಕ್ರಮದ ಬಳಿಕ ಶ್ರೀ ಕೊರಗಜ್ಜ ದೈವದ ಕೋಲ ಸೇವೆಯು ಭಕ್ತಿ ಭಾವಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರಿಗೆ ಸಿರಿಮುಡಿ ಗಂಧ ಪ್ರಸಾದ ವಿತರಿಸಲಾಯಿತು.
ಶ್ರೀ ಕೊರಗಜ್ಜ ಕ್ಷೇತ್ರವು ಭಕ್ತರ ನಂಬಿಕೆಯ ಕೇಂದ್ರವಾಗಿದ್ದು, ಪ್ರತಿನಿತ್ಯ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ದೂರದ ಊರುಗಳಿಂದಲೂ ಭಕ್ತರು ಆಗಮಿಸಿ ತಮ್ಮ ಕಷ್ಟ-ಕಾರ್ಪಣ್ಯಗಳನ್ನು ದೈವದ ಮುಂದೆ ನಿವೇದಿಸಿಕೊಂಡು ಆಶೀರ್ವಾದ ಪಡೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಧರ್ಮದರ್ಶಿ ಭರತ್ ಪೂಜಾರಿ, “ಶ್ರೀ ಕೊರಗಜ್ಜನ ಸನ್ನಿಧಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಮನದಾಳದ ಬೇಡಿಕೆಗಳು ಈಡೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ಗಾಢವಾಗಿದೆ. ಇದೇ ಕಾರಣದಿಂದ ಕ್ಷೇತ್ರಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ” ಎಂದು ತಿಳಿಸಿದರು.

