ಮಂಗಳೂರು : ಡಿಜಿಟಲ್ ಜಾಗೃತಿಯನ್ನು ಮತ್ತಷ್ಟು ಸುರಕ್ಷಿತವಾಗಿಸಲು ಐದು ಪ್ರಮುಖ ಸೂತ್ರಗಳನ್ನು ಬಳಕೆದಾರರು ಅನುಸರಿಸುವಂತೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‍ಪಿಸಿಐ) ಸಲಹೆ ಮಾಡಿದೆ.
ಯಾವುದೇ ಪಾವತಿ ಮಾಡುವ ಮೊದಲು, ಪರದೆಯ ಮೇಲೆ ಕಾಣುವ ಹೆಸರನ್ನು ಪರಿಶೀಲಿಸಿ, ನೀವು ಪಾವತಿ ಮಾಡಬೇಕೆಂದಿರುವ ವ್ಯಕ್ತಿ ಅಥವಾ ವ್ಯವಹಾರವೇ ಎಂದು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದೆ. ಇದರ ಜತೆಗೆ ಕೇವಲ ನಂಬಿಕಸ್ಥ ಪಾವತಿ ಆ್ಯಪ್‍ಗಳು ಮತ್ತು ವೆಬ್‍ಸೈಟ್‍ಗಳನ್ನು ಮಾತ್ರ ಬಳಸುವುದು ಕೂಡಾ ಪಾವತಿ ಸುರಕ್ಷತೆಗೆ ಪೂರಕ ಎಂದು ಪ್ರಕಟಣೆ ಹೇಳಿದೆ.
ನಿಮ್ಮ ಪಿನ್, ಒಟಿಪಿ ಅಥವಾ ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ಯಾವುದೇ ಪಾವತಿಗೆ ಆತುರಪಡದೇ ಸೂಕ್ತವಾಗಿ ಪರಿಶೀಲಿಸಿ ಬಳಿಕ ಪಾವತಿ ಮಾಡಬೇಕು; ಇಲ್ಲದಿದ್ದರೆ ವಂಚನೆಗೆ ಒಳಗಾಗುವ ಅಪಾಯವಿದೆ ಎಂದು ಎಚ್ಚರಿಸಿದೆ.
ಪಾವತಿ ಎಚ್ಚರಿಕೆಗಳನ್ನು ಆನ್ ಮಾಡಿಕೊಂಡು ನಿಯಮಿತವಾಗಿ ಪರಿಶೀಲಿಸುವುದರಿಂದ ಏನಾದರೂ ತಪ್ಪಾಗಿದೆ ಎಂದು ಅನಿಸಿದರೆ ತಕ್ಷಣ ನಿಮ್ಮ ಬ್ಯಾಂಕ್ ಅಥವಾ ಪಾವತಿ ಆಪ್ ಅನ್ನು ಸಂಪರ್ಕಿಸಬಹುದು. ಕೆಲವು ಜಾಗರೂಕ ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ಪ್ರತಿಯೊಬ್ಬ ಬಳಕೆದಾರರೂ ತಮ್ಮ ಡಿಜಿಟಲ್ ಸುರಕ್ಷತೆಯ ಮೇಲಿನ ನಿಯಂತ್ರಣವನ್ನು ತಮ್ಮ ಕೈಯಲ್ಲಿ ಇರಿಸಿಕೊಳ್ಳಬಹುದು. ಸಂಶಯಾಸ್ಪದ ಸಂಖ್ಯೆಯನ್ನು ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿಗೆ 1930 ಗೆ ಕರೆ ಮಾಡಿ ಅಥವಾ ದೂರಸಂಪರ್ಕ ಇಲಾಖೆಗೆ (https://sancharsaathi.gov.in/sfc/) ವರದಿ ಮಾಡುವಂತೆ ಸಲಹೆ ಮಾಡಿದೆ.
