ಲಕ್ಕಿ ಸ್ಕೀಮ್‌ನಿಂದ ಗ್ರಾಹಕರಿಗೆ ಮೋಸ ಆರೋಪ : ಕಾರ್ಕಳದಲ್ಲಿ ಪ್ರಕರಣ ದಾಖಲು

0
146

ಕಾರ್ಕಳ : ಲಕ್ಕಿ ಗಿಫ್ಟ್ ಸ್ಕೀಮ್‌ನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು, ಸ್ಕೀಮ್ ಅವಧಿ ಪೂರ್ಣಗೊಂಡ ಬಳಿಕ ಹಣವಾಗಲಿ ಅಥವಾ ಯಾವುದೇ ವಸ್ತುವನ್ನಾಗಲಿ ನೀಡದೆ ವಂಚಿಸಿದ ಆರೋಪದ ಮೇರೆಗೆ ಜೋಡುರಸ್ತೆಯಲ್ಲಿರುವ ಶ್ರೀ ದುರ್ಗಾ ಇಲೆಕ್ಟ್ರಾನಿಕ್ಸ್ & ಫರ್ನಿಚರ್ ಮಾಲಕರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರ್ಣೆ ನಿವಾಸಿ ರಶ್ಮಿ ಕುಲಾಲ್ ಅವರು ಅಂಗಡಿಯಲ್ಲಿ ನಡೆಯುತ್ತಿದ್ದ ಲಕ್ಕಿ ಸ್ಕೀಮ್‌ಗೆ ಪ್ರತೀ ತಿಂಗಳು ₹1,000ರಂತೆ ಒಟ್ಟು 20 ತಿಂಗಳು ₹20,000 ಪಾವತಿಸಿದ್ದರು. ಪ್ರತೀ ತಿಂಗಳು ಲಕ್ಕಿ ಡ್ರಾ ನಡೆಸಿ ವಿಜೇತರಿಗೆ ವಸ್ತುಗಳನ್ನು ನೀಡುವುದಾಗಿ ತಿಳಿಸಲಾಗಿತ್ತು. ಆದರೆ ಸ್ಕೀಮ್ ಅವಧಿ ಮುಗಿದ ಬಳಿಕ ಹಣವಾಗಲಿ ಅಥವಾ ಯಾವುದೇ ವಸ್ತುವನ್ನಾಗಲಿ ನೀಡದೆ, ಸದಸ್ಯರಿಗೆ ಹಣ ಹಿಂದಿರುಗಿಸದೆ ವಂಚಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಲಕ್ಕಿ ಸ್ಕೀಮ್‌ಗಳ ಬಗ್ಗೆ ಗ್ರಾಹಕರು ಎಚ್ಚರಿಕೆ ವಹಿಸಲಿ

ಇತ್ತೀಚಿನ ದಿನಗಳಲ್ಲಿ ವಿವಿಧ ಹೆಸರಿನಲ್ಲಿ ಲಕ್ಕಿ ಸ್ಕೀಮ್‌ಗಳು ನಡೆಯುತ್ತಿದ್ದು, ಹಣ ಪಾವತಿಸುವ ಮುನ್ನ ಗ್ರಾಹಕರು ಸಂಸ್ಥೆಯ ವಿಶ್ವಾಸಾರ್ಹತೆ, ನಿಯಮಗಳು ಹಾಗೂ ಹಣದ ಭದ್ರತೆ ಕುರಿತು ಪರಿಶೀಲಿಸುವುದು ಅಗತ್ಯವಾಗಿದೆ. ಸ್ಕೀಮ್‌ಗೆ ಸಂಬಂಧಿಸಿದ ರಸೀದಿ, ಒಪ್ಪಂದ ಪತ್ರ ಹಾಗೂ ಪಾವತಿಯ ದಾಖಲೆಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ವಸ್ತುಗಳನ್ನು ನೀಡಲಾಗುತ್ತದೆ ಎಂದು ಹೇಳಿದರೆ ಅದರ ಗುಣಮಟ್ಟ ಮತ್ತು ಮಾರುಕಟ್ಟೆ ಮೌಲ್ಯವನ್ನೂ ಪರಿಶೀಲಿಸುವುದು ಸೂಕ್ತ.

ಲಕ್ಕಿ ಸ್ಕೀಮ್‌ನ ಆಕರ್ಷಕ ಆಮಿಷಕ್ಕೆ ಒಳಗಾಗಿ ಹಣ ಕಳೆದುಕೊಳ್ಳದಂತೆ ಗ್ರಾಹಕರು ಹೆಚ್ಚಿನ ಜಾಗರೂಕತೆ ವಹಿಸುವುದು ಅಗತ್ಯ.