ಮಂಗಳೂರು: 203-ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯಲ್ಲಿ ಮನೆಗಳು ಅಸ್ತಿತ್ವದಲ್ಲಿಲ್ಲದಿದ್ದರೂ ಹಾಗೂ ಸಂಬಂಧಪಟ್ಟ ಮತದಾರರು ಆ ಸ್ಥಳದಲ್ಲಿ ವಾಸವಾಗಿರದಿದ್ದರೂ ಕೆಲವು ಹೆಸರುಗಳು ಮುಂದುವರಿದಿರುವ ಬಗ್ಗೆ ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ದಾಖಲೆ ಸಹಿತ ಮನವಿ ಸಲ್ಲಿಸಿದರು.
ಇತ್ತೀಚೆಗೆ ಪ್ರಕಟಗೊಂಡಿರುವ ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿದ ಸಂದರ್ಭದಲ್ಲಿ ಹಲವು ಅಸಂಗತತೆಗಳು ಕಂಡುಬಂದಿವೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. 2023-24ರಲ್ಲಿ ಮತ ಚಲಾಯಿಸಿದ್ದಾರೆ ಎಂಬ ಕಾರಣಕ್ಕೆ, ಪ್ರಸ್ತುತ ಮನೆಗಳು ಅಸ್ತಿತ್ವದಲ್ಲಿಲ್ಲದಿದ್ದರೂ ಕೆಲವು ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಮುಂದುವರಿಸಲಾಗಿದೆ. ಕೆಲವು ಮನೆಗಳು ನೆಲಸಮಗೊಂಡು ಆ ಸ್ಥಳಗಳು ಆಟದ ಮೈದಾನ ಸೇರಿದಂತೆ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿದ್ದರೂ, ಮನೆ ಸಂಖ್ಯೆ ಇಲ್ಲದೆ ಮತದಾರರ ಹೆಸರುಗಳು ಪಟ್ಟಿಯಲ್ಲಿ ಉಳಿದಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಸಂಬಂಧಪಟ್ಟವರು ಬೇರೆಡೆ ಮನೆ ಮಾಡಿಕೊಂಡು ಅಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರೂ, ಹಿಂದಿನ ಸ್ಥಳದಲ್ಲಿಯೂ ಹೆಸರು ಮುಂದುವರಿದಿರುವ ಪ್ರಕರಣಗಳಿವೆ ಎಂದು ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 59ನೇ ವಾರ್ಡ್ ಜೆಪ್ಪು, ಭಾಗ ಸಂಖ್ಯೆ 167, ಪುಟ ಸಂಖ್ಯೆ 8ರಲ್ಲಿ ಕ್ರಮ ಸಂಖ್ಯೆ 160ರಿಂದ 167ರವರೆಗೆ ನಮೂದಾಗಿರುವ ಮತದಾರರ ವಿವರಗಳನ್ನು ಈ ಸಂದರ್ಭದಲ್ಲಿ ದಾಖಲೆ ಸಹಿತವಾಗಿ ಅಧಿಕಾರಿಗಳ ಗಮನಕ್ಕೆ ತರಲಾಯಿತು.
ಇದೇ ವೇಳೆ 203-ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 1,000ಕ್ಕೂ ಅಧಿಕ ಮಂದಿಗೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಸಂಬಂಧ ನಮೂನೆ-7 ನೀಡಿರುವ ವಿಚಾರವನ್ನೂ ಅಧಿಕಾರಿಗಳ ಗಮನಕ್ಕೆ ತರಲಾಯಿತು. ನಮೂನೆ-7ರ ಮೂಲಕ ಬಂದಿರುವ ಅರ್ಜಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಸಂಬಂಧಪಟ್ಟ ವ್ಯಕ್ತಿಯ ಹೆಸರು ಎಲ್ಲಿ ಇದೆ, ಯಾವ ಕಾರಣಕ್ಕೆ ಇದೆ ಹಾಗೂ ಅವರು ಜೀವಂತವಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸಿದ ಬಳಿಕವೇ ಹೆಸರು ಕೈಬಿಡುವ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.
ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದರು. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳಲ್ಲಿ ಕೆಲವು ಮತದಾರರ ಹೆಸರುಗಳನ್ನು ಅನಾವಶ್ಯಕವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಲು ಒತ್ತಡ ಹೇರಲಾಗುತ್ತಿದೆ ಎಂಬ ಆರೋಪವನ್ನೂ ಮಾಡಿದರು.
ಈ ಹಿನ್ನೆಲೆಯಲ್ಲಿ ಐವನ್ ಡಿʼಸೋಜಾ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ದಾಖಲೆ ಸಹಿತ ಮನವಿ ಸಲ್ಲಿಸಿದರು. ನೈಜ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು. ಅದೇ ರೀತಿ ಅನರ್ಹರನ್ನು ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮನವಿಯನ್ನು ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿಯವರು ಈ ಕುರಿತು ಸೂಕ್ತ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್, ಮಾಜಿ ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜಾ, ಪ್ರವೀಣ್ ಚಂದ್ರ ಆಳ್ವಾ, ಪ್ರಕಾಶ್ ಸಾಲಿಯಾನ್, ಅಶ್ರಫ್ ಬಜಾಲ್, ಸತೀಶ್ ಪೆಂಗಲ್, ಭಾಸ್ಕರ್ ರಾವ್, ಎಸ್‌ಐಆರ್ ಕಾಂಗ್ರೆಸ್ ಪಕ್ಷದ ಸಂಯೋಜಕರಾದ ಅಮಿತಾ ಅಶ್ವಿನ್, ಮಂಜುಳಾ ನಾಯಕ್, ರಫೀಕ್ ಇಕೆ, ಪ್ರಿಯಾ ಪ್ರಕಾಶ್ ಪಾತ್ರಾವ್, ದುರ್ಗಾ ಪ್ರಸಾದ್, ಹ್ಯಾರಿ ಮಣ್ಣಗುಡ್ಡ, ವಹಾಬ್ ಕುದ್ರೋಳಿ, ಶಾಂತಲ ಗಟ್ಟಿ, ಯೋಗೀಶ್ ನಾಯಕ್, ನೀತು ಡಿಸೋಜಾ, ರಾಬರ್ಟ್ ಡಿಸೋಜಾ, ದಿನೇಶ್ ರಾವ್, ಬಶೀರ್, ಶರತ್ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

