ವಾಟ್ಸಾಪ್ ಸ್ಟೇಟಸ್ ವಿಚಾರವಾಗಿ ಗಲಾಟೆ

0
29

ವಿಟ್ಲ : ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಗೋಳಿಕಟ್ಟೆಯಲ್ಲಿ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದ ಪೋಸ್ಟರ್ ವಿಚಾರವಾಗಿ ವಿಕಲಚೇತನ ವ್ಯಕ್ತಿಯೊಬ್ಬರ ಮೇಲೆ ಆರು ಮಂದಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಕ್ಟೋಬರ್ 9ರಂದು ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದವರನ್ನು ವಿವೇಕಾನಂದ ಶೆಟ್ಟಿ (47) ಎಂದು ಗುರುತಿಸಲಾಗಿದೆ.

ವಿವೇಕಾನಂದ ಶೆಟ್ಟಿ ಅವರು ಅಕ್ಟೋಬರ್ 9ರಂದು ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಗೋಳಿಕಟ್ಟೆಯ ಹೋಟೆಲ್ ಸಮೀಪ ನಿಂತಿದ್ದಾಗ, ಹತ್ತು ದಿನಗಳ ಹಿಂದೆ ವಾಟ್ಸಾಪ್‌ನಲ್ಲಿ ಹಂಚಿಕೊಂಡಿದ್ದ ಪೋಸ್ಟರ್ ವಿಚಾರವಾಗಿ ಆರು ಮಂದಿ ಅಲ್ಲಿಗೆ ಬಂದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಗಳಾದ ಕಿರಣ್ ಕುಮಾರ್ ಮತ್ತು ರವಿ ಪೂಜಾರಿ ಅವರು ದೊಣ್ಣೆ ಹಾಗೂ ಪೊರಕೆಯಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಗೌರೀಶ್ ಶೆಟ್ಟಿ ಮತ್ತು ಮೋಹನ್ ಚಂದ್ರ ಶೆಟ್ಟಿ ಅವರು ಹಲ್ಲೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕಮಲ ಮತ್ತು ವಿದ್ಯಾ ಅವರು ಚಪ್ಪಲಿಯಿಂದ ಮುಖ ಹಾಗೂ ದೇಹಕ್ಕೆ ಹಲ್ಲೆ ನಡೆಸಿ, ನೆಲಕ್ಕೆ ಬಿದ್ದಿದ್ದ ವಿವೇಕಾನಂದ ಶೆಟ್ಟಿ ಅವರನ್ನು ಕಾಲಿನಿಂದ ತುಳಿದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂದರ್ಭದಲ್ಲಿ ಪ್ರವೀಣ್, ಕುಸುಮಾಧರ ಮತ್ತು ಚಂದ್ರಹಾಸ ಅವರು ಸ್ಥಳಕ್ಕೆ ಆಗಮಿಸಿದಾಗ ಆರೋಪಿಗಳು ಕೊಲೆ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಲ್ಲೆಯಿಂದ ಗಾಯಗೊಂಡ ವಿವೇಕಾನಂದ ಶೆಟ್ಟಿ ಅವರನ್ನು ಪುತ್ತೂರು ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 212/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 352, 133, 118(1), 351(2) ಹಾಗೂ 190ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

.