ಬೆಂಗಳೂರು: ಭಾರತದ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಉದ್ಯಮದಲ್ಲಿ ಗುರುತಿಸಿಕೊಂಡಿರುವ ಜಾಕ್ಸನ್ ಗ್ರೂಪ್ನ ಭಾಗವಾದ ಆಲ್ಟಿಗ್ರೀನ್, ಬಹು-ಉಪಯೋಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ‘ಮಿನ್ಸಾರಾ’ (MINSARA) ಅನ್ನು ಪರಿಚಯಿಸಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಗ್ರಾಹಕರು, ಸಣ್ಣ ಉದ್ಯಮಿಗಳು, ರೈತರು ಹಾಗೂ ವಿತರಣಾ ವೃತ್ತಿಪರರ ದೈನಂದಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ವಾಹನವನ್ನು ವಿನ್ಯಾಸಗೊಳಿಸಲಾಗಿದೆ.
ಸಾಮಾನ್ಯ ಸಂಚಾರದ ಜೊತೆಗೆ ಸರಕು ಸಾಗಣೆ ಹಾಗೂ ವಾಣಿಜ್ಯ ಉದ್ದೇಶಗಳಿಗೂ ಬಳಸಬಹುದಾದ ರೀತಿಯಲ್ಲಿ ಮಿನ್ಸಾರಾವನ್ನು ಅಭಿವೃದ್ಧಿಪಡಿಸಲಾಗಿದೆ. ವಿಭಿನ್ನ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಮಿನ್ಸಾರಾ S, ಮಿನ್ಸಾರಾ S+ ಮತ್ತು ಮಿನ್ಸಾರಾ SE ಎಂಬ ಮೂರು ಮಾದರಿಗಳನ್ನು ಬಿಡುಗಡೆ ಮಾಡಲಾಗಿದೆ.
ಮಿನ್ಸಾರಾ S ಮಾದರಿಯು 2.78 kWh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಒಂದು ಚಾರ್ಜ್ನಲ್ಲಿ 125 ಕಿ.ಮೀ.ವರೆಗೆ ಪ್ರಯಾಣಿಸಬಹುದು. ಮಿನ್ಸಾರಾ S+ ಮಾದರಿಯು 3.8 kWh ಬ್ಯಾಟರಿ ಹೊಂದಿದ್ದು, 165 ಕಿ.ಮೀ.ವರೆಗೆ ವ್ಯಾಪ್ತಿ ನೀಡುತ್ತದೆ. ಮಿನ್ಸಾರಾ SE ಮಾದರಿಯಲ್ಲಿ ಬ್ಯಾಟರಿ ಬದಲಾಯಿಸುವ ಸೌಲಭ್ಯವನ್ನು ಒದಗಿಸಲಾಗಿದೆ.
ವಾಹನವು 172 Nm ಗರಿಷ್ಠ ಟಾರ್ಕ್, ಶೇ.33ರಷ್ಟು ಇಳಿಜಾರು ಹತ್ತುವ ಸಾಮರ್ಥ್ಯ ಹಾಗೂ 264 ಕೆ.ಜಿ. ಒಟ್ಟು ವಾಹನ ತೂಕದ ಸಾಮರ್ಥ್ಯ ಹೊಂದಿದೆ. ಗಂಟೆಗೆ ಗರಿಷ್ಠ 75 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. 17 ಇಂಚಿನ ಅಲಾಯ್ ವೀಲ್ಗಳು, ಬಾಳಿಕೆ ಬರುವ ರಿಬ್-ಕೇಜ್ ಚಾಸಿಸ್, ಟೆಲಿಸ್ಕೋಪಿಕ್ ಸಸ್ಪೆನ್ಷನ್, ಕ್ರ್ಯಾಶ್ ಗಾರ್ಡ್ ಹಾಗೂ CBS ತಂತ್ರಜ್ಞಾನ ಹೊಂದಿರುವ ಡ್ಯುಯಲ್ ಡಿಸ್ಕ್ ಬ್ರೇಕ್ಗಳನ್ನು ಒಳಗೊಂಡಿದೆ.
ಮಿನ್ಸಾರಾ ಬಿಡುಗಡೆ ಕುರಿತು ಮಾತನಾಡಿದ ಜಾಕ್ಸನ್ ಗ್ರೀನ್ ವೆಹಿಕಲ್ಸ್ ಸಿಇಒ ದೀಪಕ್ ಠಾಕೂರ್, ಭಾರತದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ವಿಭಿನ್ನ ಸಾರಿಗೆ ಹಾಗೂ ಉದ್ಯೋಗ ಆಧಾರಿತ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಈ ವಾಹನವನ್ನು ಪರಿಚಯಿಸಲಾಗಿದೆ. ಉಪಯುಕ್ತತೆ, ಕಾರ್ಯಕ್ಷಮತೆ ಮತ್ತು ಸುಸ್ಥಿರ ತಂತ್ರಜ್ಞಾನವನ್ನು ಒಂದೇ ಉತ್ಪನ್ನದಲ್ಲಿ ಒಗ್ಗೂಡಿಸಲಾಗಿದೆ ಎಂದು ತಿಳಿಸಿದರು.
ಆಲ್ಟಿಗ್ರೀನ್ನ ಸಿಟಿಒ ಹಾಗೂ ಸಂಸ್ಥಾಪಕ ಅಮಿತಾಭ್ ಸರನ್ ಮಾತನಾಡಿ, ಗ್ರಾಹಕರ ನೈಜ ಅಗತ್ಯಗಳಿಗೆ ಪರಿಹಾರ ಒದಗಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಮಿನ್ಸಾರಾ ಭಾರತದ ವಿದ್ಯುತ್ ಚಲನಶೀಲತೆ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದ್ದು, ಸಂಸ್ಥೆಯ ಪ್ರಸ್ತುತ ಸರಕು ಸಾಗಣೆ ತ್ರಿಚಕ್ರ ವಾಹನಗಳ ಉತ್ಪನ್ನ ಶ್ರೇಣಿಗೆ ಉತ್ತಮ ಸೇರ್ಪಡೆಯಾಗಿದೆ ಎಂದರು.
ಬೆಲೆ ಮತ್ತು ಲಭ್ಯತೆ: ಮಿನ್ಸಾರಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಆರಂಭಿಕ ಬೆಲೆ ₹1.24 ಲಕ್ಷ (ಎಕ್ಸ್-ಶೋರೂಮ್) ಆಗಿದೆ. ವಾಹನಕ್ಕೆ 3 ವರ್ಷ ಅಥವಾ 30,000 ಕಿ.ಮೀ.ಗಳ ಪ್ರಮಾಣಿತ ಖಾತರಿ ನೀಡಲಾಗುತ್ತದೆ. ಬೆಂಗಳೂರು, ವಿಜಯವಾಡ ಮತ್ತು ನೋಯ್ಡಾದಲ್ಲಿರುವ ಆಲ್ಟಿಗ್ರೀನ್ ಡೀಲರ್ಶಿಪ್ಗಳಲ್ಲಿ ಬುಕ್ಕಿಂಗ್ ಆರಂಭವಾಗಿದೆ. 2026ರ ಡಿಸೆಂಬರ್ 1ರಿಂದ ವಾಹನಗಳ ವಿತರಣೆ ಪ್ರಾರಂಭವಾಗಲಿದೆ.
ಸರಕು ಸಾಗಣೆ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಬಳಿಕ ದ್ವಿಚಕ್ರ ವಾಹನಗಳ ಬಹು-ಉಪಯುಕ್ತತೆ ವಿಭಾಗಕ್ಕೂ ಪ್ರವೇಶಿಸಿರುವ ಆಲ್ಟಿಗ್ರೀನ್, ಮುಂದಿನ ದಿನಗಳಲ್ಲಿ ಪ್ರಯಾಣಿಕರ ತ್ರಿಚಕ್ರ ವಾಹನ ವಿಭಾಗಕ್ಕೂ ವಿಸ್ತರಿಸುವ ಯೋಜನೆ ಹೊಂದಿದೆ.

