ಕುಂದಾಪುರ : ಕಡಿಮೆ ಬಡ್ಡಿದರದಲ್ಲಿ 40 ಲಕ್ಷ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ 5.69 ಲಕ್ಷ ರೂಪಾಯಿ ಪಡೆದು ಆನ್‌ಲೈನ್ ವಂಚಕರು ವಂಚಿಸಿರುವ ಘಟನೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುಂದಾಪುರ ತಾಲೂಕಿನ ಕಸಬ ಗ್ರಾಮದ ಕೆಳ ಖಾರ್ವಿಕೇರಿ, ಡೋಗಿ ಪೇರಿ ರಸ್ತೆ ನಿವಾಸಿ ಪ್ರಣೀತ (38) ವಂಚನೆಗೊಳಗಾದ ಮಹಿಳೆ.
ಮಾರ್ಚ್ 10ರಂದು ಪ್ರಣೀತ ಅವರು ತಮ್ಮ ಮೊಬೈಲ್‌ನಲ್ಲಿ ಫೇಸ್‌ಬುಕ್ ವೀಕ್ಷಿಸುತ್ತಿದ್ದ ವೇಳೆ, “PMGDY ಯೋಜನೆಯಡಿ ಸುಲಭವಾಗಿ ಲೋನ್ ಪಡೆಯಿರಿ” ಎಂಬ ಜಾಹೀರಾತು ಗಮನಕ್ಕೆ ಬಂದಿದೆ. ಜಾಹೀರಾತಿನಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ತನ್ನನ್ನು ‘ಶ್ರೀನಿವಾಸ್ ರಾವ್’ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ 40 ಲಕ್ಷ ರೂಪಾಯಿ ಸಾಲ ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾನೆ.
ಸಾಲ ಮಂಜೂರಾತಿಗೆ ಮುನ್ನ ಪ್ರೊಸೆಸಿಂಗ್ ಫೀಸ್, ವಿಮೆ ಹಾಗೂ ಇತರೆ ಶುಲ್ಕಗಳ ಹೆಸರಿನಲ್ಲಿ ಹಣ ಪಾವತಿಸಬೇಕೆಂದು ಹೇಳಿದ್ದಾನೆ. ಆತನ ಮಾತುಗಳನ್ನು ನಂಬಿದ ಮಹಿಳೆ 2026ರ ಮಾರ್ಚ್ 11ರಿಂದ ಏಪ್ರಿಲ್ 13ರವರೆಗೆ ವಿವಿಧ ಕಂತುಗಳಲ್ಲಿ 5,69,069 ರೂಪಾಯಿ ಹಣವನ್ನು ಫೋನ್‌ಪೇ ಮೂಲಕ ಆರೋಪಿಯು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.
ಆದರೆ, ಇಷ್ಟೊಂದು ಹಣ ಪಾವತಿಸಿದ ಬಳಿಕವೂ ಯಾವುದೇ ಸಾಲದ ಮೊತ್ತ ಬಿಡುಗಡೆಯಾಗದೇ ಆರೋಪಿಯು ಮಹಿಳೆಯನ್ನು ಸತಾಯಿಸಿದ್ದಾನೆ. ಬಳಿಕ ಹಣ ವಾಪಸ್ ನೀಡುವಂತೆ ಕೇಳಿದಾಗ, ಸಾಲ ಬಿಡುಗಡೆಗೆ ಇನ್ನಷ್ಟು ಹಣ ಜಮಾ ಮಾಡಬೇಕೆಂದು ಮತ್ತೊಮ್ಮೆ ಬೇಡಿಕೆ ಇಟ್ಟಿದ್ದಾನೆ.
ಇದರಿಂದ ತಾವು ವಂಚನೆಗೆ ಒಳಗಾಗಿರುವುದನ್ನು ಅರಿತ ಪ್ರಣೀತ ಅವರು ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

