ಮೂಡುಬಿದಿರೆ : ಸಮಾಜದಲ್ಲಿ ಸಂಕಷ್ಟದಲ್ಲಿರುವ ಹಾಗೂ ಅಶಕ್ತರಿಗೆ ನೆರವಿನ ಹಸ್ತ ಚಾಚುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ನವಚೇತನ ಸೇವಾ ಬಳಗ (ರಿ.) ತೋಡಾರು ಇದೀಗ ಕಲೆಯ ಮೂಲಕ ಸಮಾಜಸೇವೆಯ ಸಂದೇಶ ಸಾರುವ ಮತ್ತೊಂದು ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ.
‘ಬಡವರ ಸೇವೆಯೇ ದೇವರ ಸೇವೆ’ ಎಂಬ ಧ್ಯೇಯವಾಕ್ಯವನ್ನು ಮೈಗೂಡಿಸಿಕೊಂಡಿರುವ ನವಚೇತನ ಸೇವಾ ಬಳಗವು ಕೇವಲ ಸೇವಾ ಕಾರ್ಯಗಳಿಗೆ ಸೀಮಿತವಾಗದೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕವೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಸಮಾಜದ ಅಶಕ್ತರಿಗೆ ನೆರವಾಗಬೇಕು ಎಂಬ ಸದುದ್ದೇಶದಿಂದ ತುಳು ನಾಟಕ ಪ್ರದರ್ಶನವನ್ನು ಆಯೋಜಿಸಿರುವುದು ಸಂಸ್ಥೆಯ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಲಿದೆ.
ಈ ಪ್ರಯತ್ನದ ಅಂಗವಾಗಿ ನವೆಂಬರ್ 14ರಂದು ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ‘ಒಂಜಿ ಗುಜ್ಜೆದ ಕಥೆ’ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ವಿಜಯ ಶೆಟ್ಟಿ ಕಾರ್ಕಳ ಅವರ ಸಾರಥ್ಯದಲ್ಲಿ ಸಿಂಧೂರ ಕಲಾವಿದೆರ್ ಕಾರ್ಲ ತಂಡದ ಕಲಾವಿದರು ಈ ನಾಟಕವನ್ನು ಪ್ರಸ್ತುತಪಡಿಸಲಿದ್ದಾರೆ.
‘Every Truth Has a Story’ ಎಂಬ ಅಡಿಬರಹ ಹೊಂದಿರುವ ಈ ನಾಟಕವು ರಂಗಭೂಮಿಯ ಮೂಲಕ ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ವಿಭಿನ್ನ ಅನುಭವ ನೀಡುವ ನಿರೀಕ್ಷೆಯಿದೆ.
ಸಮಾಜದ ಪ್ರತಿಯೊಬ್ಬರಿಗೂ ಸೇವಾ ಮನೋಭಾವನೆ ಮೂಡಬೇಕು, ಅಶಕ್ತರ ಬದುಕಿಗೆ ಸಾಧ್ಯವಾದಷ್ಟು ನೆರವಾಗಬೇಕು ಎಂಬ ಆಶಯದೊಂದಿಗೆ ನವಚೇತನ ಸೇವಾ ಬಳಗವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಲೆಯ ಮೂಲಕ ಸಮಾಜಸೇವೆಗೆ ಕೈಜೋಡಿಸುವ ಈ ಪ್ರಯತ್ನಕ್ಕೆ ಸಾರ್ವಜನಿಕರ ಸಹಕಾರ ಮತ್ತು ಪ್ರೋತ್ಸಾಹ ಅತ್ಯಗತ್ಯವಾಗಿದೆ.
ಕಾರ್ಯಕ್ರಮಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ರಾತ್ರಿ 6.30ಕ್ಕೆ ಸರಿಯಾಗಿ ನಾಟಕ ಪ್ರದರ್ಶನ ಆರಂಭವಾಗಲಿದೆ. ಕಲಾಭಿಮಾನಿಗಳು, ಸಾರ್ವಜನಿಕರು ಹಾಗೂ ಬಂಧುಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ನವಚೇತನ ಸೇವಾ ಬಳಗ ಮನವಿ ಮಾಡಿದೆ.

