ಬೆಳ್ತಂಗಡಿ : ಮನಸ್ವಿನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ.), ಬಲಂಜ ಇವರ ವತಿಯಿಂದ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಹಾಗೂ ತಾಲೂಕು ಅಭಿಯಾನ ನಿರ್ವಹಣಾ ಘಟಕ, ಬೆಳ್ತಂಗಡಿ ಇವರ ಸಹಯೋಗದೊಂದಿಗೆ ಪೇಪರ್ ಬ್ಯಾಗ್ ಮತ್ತು ಬಟ್ಟೆ ಚೀಲ ತಯಾರಿಕಾ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಒಕ್ಕೂಟದ ಅಧ್ಯಕ್ಷೆ ಲಿಲ್ಲಿ ವೇಗಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಜ್ಯೋತಿರಾಜ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ವಿಕಾಸ ಟ್ರಸ್ಟ್ನ ವ್ಯವಸ್ಥಾಪಕ ಜೀವನ್ ಕೊಲ್ಯ ಅವರು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಪೇಪರ್ ಬ್ಯಾಗ್ ಮತ್ತು ಬಟ್ಟೆ ಚೀಲಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ತರಬೇತಿಯು ಮಹಿಳೆಯರಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಸ್ವ ಉದ್ಯೋಗಕ್ಕೆ ಉತ್ತೇಜನ ನೀಡಲಿದೆ ಎಂದರು.
ಜ್ಯೋತಿರಾಜ್ ಅವರು ಮಹಿಳೆಯರು ಸ್ವ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಲಭ್ಯವಿರುವ ವಿವಿಧ ಆರ್ಥಿಕ ಸೌಲಭ್ಯಗಳು ಮತ್ತು ಅವಕಾಶಗಳ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷೆ ಲಿಲ್ಲಿ ವೇಗಸ್ ಅವರು ತರಬೇತಿಯ ಸದುಪಯೋಗ ಪಡೆದುಕೊಂಡು ಉದ್ಯಮಶೀಲತೆಯತ್ತ ಮುನ್ನಡೆಯುವಂತೆ ಮಹಿಳೆಯರಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಕೃಷಿಯೇತರ ಜೀವನೋಪಾಯ ತಾಲೂಕು ವ್ಯವಸ್ಥಾಪಕ ನಿತೀಶ್, ತರಬೇತುದಾರರಾದ ವಾಣಿಶ್ರೀ ಹಾಗೂ ಪಂಚಾಯತ್ ಕಾರ್ಯದರ್ಶಿ ಪಮ್ಮು ಉಪಸ್ಥಿತರಿದ್ದರು.
ಭಾರತಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ LCRP ಬೇಬಿ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಸ್ವಸ್ತಿಕ್ ಜೈನ್ ನಿರೂಪಿಸಿದರು. ಒಕ್ಕೂಟದ ಕಾರ್ಯದರ್ಶಿ ಪ್ರಸನ್ನ ವಂದಿಸಿದರು.

