
ಮಂಗಳೂರು : ಮುಡಿಪು ಮಾರ್ಗದಲ್ಲಿ ಸಂಚರಿಸುವ ನಾಮಫಲಕ ಹೊಂದಿದ ಕೆ.ಎಸ್.ಆರ್.ಟಿ.ಸಿ. (K.S.R.T.C.) ಬಸ್ಸೊಂದರ (ನೋಂದಣಿ ಸಂಖ್ಯೆ: KA 42 F 2030) ಹಿಂಭಾಗದಲ್ಲಿ ಜಾಹೀರಾತನ್ನು ಅಂಟಿಸುವ ಭರದಲ್ಲಿ ಇಂಜಿನಿಯರಿಂಗ್ ಬುದ್ಧಿಯನ್ನೆಲ್ಲಾ ತಲೆಕೆಳಗಾಗಿ ಪ್ರಯೋಗಿಸಲಾಗಿದೆ!
ಬಸ್ಸಿನ ಮೇಲಿರಬೇಕಾದ ‘ನಗರ ಸಾರಿಗೆ’ ಎಂಬ ಪ್ರಮುಖ ಬರಹವನ್ನು ಜಾಣತನದಿಂದ ಮುಚ್ಚಿಹಾಕಿ, ಜಾಹೀರಾತನ್ನು ಸಂಪೂರ್ಣವಾಗಿ ತಲೆಕೆಳಗಾಗಿ ಅಂಟಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಬಿದ್ದು ಬಿದ್ದು ನಗುವಂತೆ ಮಾಡಿದೆ.

ಜಾಹೀರಾತು ಕಂಪನಿಯವರ ಕಣ್ಣಿಗೆ ಗುರುತ್ವಾಕರ್ಷಣೆಯ ನಿಯಮವೇ ಉಲ್ಟಾ ಆಗಿದೆಯೋ ಅಥವಾ ಬಸ್ಸಿಗೆ ಕಣ್ಣುಮುಚ್ಚಾಲೆ ಆಟ ಆಡಿಸುತ್ತಿದ್ದಾರೋ ಗೊತ್ತಿಲ್ಲ, ಒಟ್ಟಿನಲ್ಲಿ ಈ ನಗೆಪಾಟಲಿನ ಕೃತ್ಯವು ಕಾನೂನಿನ ಉಲ್ಲಂಘನೆ ಮಾತ್ರವಲ್ಲ, ಅವಿವೇಕತನದ ಹಾಗೂ ಬೇಜವಾಬ್ದಾರಿಯ ಪರಮಾವಧಿಯಾಗಿದೆ
ಬಸ್ ಮುಂದಕ್ಕೆ ಚಲಿಸಿದರೆ, ಜಾಹೀರಾತು ಮಾತ್ರ ಲೋಕದ ಕಣ್ಣಿಗೆ ತಲೆಕೆಳಗಾಗಿ ನಿಂತು ಸಾರ್ವಜನಿಕರಿಗೆ ಉಚಿತ ಮನರಂಜನೆ ನೀಡುತ್ತಿದೆ.
ವಿದ್ಯಾವಂತರು ಮತ್ತು ಬುದ್ಧಿವಂತರ ನಾಡು ಎಂದು ಹೆಮ್ಮೆಯಿಂದ ಕರೆಯಲ್ಪಡುವ ಮಂಗಳೂರಿನಲ್ಲಿ ಇಂತಹ ‘ಅದ್ಭುತ ಕಲೆ’ ಪ್ರದರ್ಶನವಾಗಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.
ಈ ವೈರಲ್ ಚಿತ್ರದ ಹಿಂದಿರುವ ಸತ್ಯ ಸತ್ಯತೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ತಲೆಕೆಳಗಾದ ಕಾನೂನು ಉಲ್ಲಂಘನೆ ಮಾಡಿದ ಸಂಬಂಧಪಟ್ಟ ಎಲ್ಲರ ಮೇಲೂ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಆಗಬೇಕಿದೆ ಎಂಬುದು ಸಾರ್ವಜನಿಕ ಆಶಯವಾಗಿದೆ.
