ಅಸ್ವಸ್ಥ ಸ್ಥಿತಿಯಲ್ಲಿ ಫುಟ್‌ಪಾತ್‌ನಲ್ಲಿ ಮಲಗಿದ್ದ ವೃದ್ಧನ ರಕ್ಷಣೆ

0
53

ಬ್ರಹ್ಮಾವರ : ಇಲ್ಲಿನ ಅಂಚೆ ಕಚೇರಿ ಮುಂಭಾಗದ ಫುಟ್‌ಪಾತ್‌ನಲ್ಲಿ ಕಳೆದ ಕೆಲವು ದಿನಗಳಿಂದ ಅಸ್ವಸ್ಥ ಸ್ಥಿತಿಯಲ್ಲಿ ಮಲಗಿದ್ದ ಅಪರಿಚಿತ ವೃದ್ಧರೊಬ್ಬರನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಬುಧವಾರ ರಕ್ಷಿಸಿ, ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯ ಆಟೋ ಚಾಲಕರು ಸಹಕರಿಸಿದರು.

ದಾಖಲಾತಿ ಪ್ರಕ್ರಿಯೆ ವೇಳೆ ವೃದ್ಧರು ತಮ್ಮ ಹೆಸರು ಶೇಖರ ಪೂಜಾರಿ (75) ಎಂದು ತಿಳಿಸಿದ್ದಾರೆ. ಕೆಲವು ವರ್ಷಗಳಿಂದ ಮನೆಯವರ ಸಂಪರ್ಕವಿಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ವೃದ್ಧರ ಸಂಬಂಧಿಕರು ಉಡುಪಿಯ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.