ರಾಯಚೂರು : ಬಾಕಿ ಉಳಿಸಿಕೊಂಡಿದ್ದ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಕ್ರಮಕ್ಕೆ ಆಕ್ರೋಶಗೊಂಡ ರೈತನೊಬ್ಬ ಜೆಸ್ಕಾಂ ಉಪ ಕಚೇರಿಗೇ ಬೆಂಕಿ ಹಚ್ಚಿದ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ ನಡೆದಿದೆ.
ಹಳ್ಳಿಹೊಸೂರು ಗ್ರಾಮದ ಶಿವಪ್ಪ ಬಸನಗೌಡ ಗಡಿಗಿ ಎಂಬಾತ ಸುಮಾರು ₹11 ಸಾವಿರ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದ. ಬಾಕಿ ಹಣ ಪಾವತಿಸುವಂತೆ ಜೆಸ್ಕಾಂ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ ಆತ ಹಣ ಪಾವತಿಸಿರಲಿಲ್ಲ ಎನ್ನಲಾಗಿದೆ.
ಇದರಿಂದ ಮೇಲಧಿಕಾರಿಗಳ ಸೂಚನೆಯಂತೆ ಜೆಸ್ಕಾಂ ಸಿಬ್ಬಂದಿ ರಿಚರ್ಡ್ ಅವರು ಶಿವಪ್ಪನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಈ ಕ್ರಮದಿಂದ ಆಕ್ರೋಶಗೊಂಡ ಶಿವಪ್ಪ ಬುಧವಾರ ಮಲ್ಲಟ ಗ್ರಾಮದ ಜೆಸ್ಕಾಂ ಉಪ ಕಚೇರಿಗೆ ತೆರಳಿ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ, ಬಳಿಕ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಹಲ್ಲೆಗೆ ಹೆದರಿದ ಸಿಬ್ಬಂದಿ ಕಚೇರಿಯಿಂದ ಹೊರಬಂದ ಬಳಿಕ, ಆರೋಪಿ ಕಚೇರಿಯೊಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪರಿಣಾಮ ಕಚೇರಿಯಲ್ಲಿದ್ದ ಪ್ರಮುಖ ದಾಖಲೆಗಳು, ಕಂಪ್ಯೂಟರ್, ಲ್ಯಾಪ್‌ಟಾಪ್, ಬ್ಯಾಟರಿ ಹಾಗೂ ನಗದು ಸೇರಿದಂತೆ ಸುಮಾರು ₹1 ಲಕ್ಷ ಮೌಲ್ಯದ ಸಾರ್ವಜನಿಕ ಆಸ್ತಿ ಬೆಂಕಿಗಾಹುತಿಯಾಗಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸಿರವಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಘಟನೆ ಸಾರ್ವಜನಿಕ ಆಸ್ತಿಯ ಮೇಲಿನ ದಾಳಿಯಾಗಿ ಪರಿಗಣಿಸಲಾಗಿದ್ದು, ಕಾನೂನು ಕ್ರಮದ ಜೊತೆಗೆ ನಷ್ಟದ ಮೌಲ್ಯಮಾಪನವನ್ನೂ ಅಧಿಕಾರಿಗಳು ನಡೆಸುತ್ತಿದ್ದಾರೆ.

