ಮೂಡುಬಿದಿರೆ : ಸಾಹಿತ್ಯ ಮತ್ತು ಸಾಂಸ್ಕೃತಿಕ ನಗರಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಅಪೂರ್ವ ಸಾಹಿತ್ಯ ಸಂಭ್ರಮಕ್ಕೆ ವೇದಿಕೆ ಸಿದ್ಧಗೊಂಡಿದೆ.ಉದಯೋನ್ಮುಖ ಕವಯಿತ್ರಿ ಸೌಮ್ಯ ತಿಲಕ್ ಶೆಟ್ಟಿ ಅವರ ಕವನ ಸಂಕಲನ ‘ಮಸಿಯ ಮಾತು’ ಇದೇ ಬರುವ ಜೂನ್ 26ರ ಶುಕ್ರವಾರ ಸಂಜೆ 04:00 ಗಂಟೆಗೆ ವಿದ್ಯಾಗಿರಿಯ ಆಳ್ವಾಸ್ ಸ್ವಾಯತ್ತ ಪದವಿ ಕಾಲೇಜಿನ ‘ಕುವೆಂಪು ಸಭಾಂಗಣ’ದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಯಾಂತ್ರಿಕ ಬದುಕಿನ ನಡುವೆ ಕಾವ್ಯದ ಮೂಲಕ ಮನುಷ್ಯನ ಅಂತರಂಗದ ಭಾವನೆಗಳನ್ನು ಜಾಗೃತಗೊಳಿಸುವ ಮತ್ತು ಯುವ ಪೀಳಿಗೆಯಲ್ಲಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಉದಾತ್ತ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ವಿಶಿಷ್ಟ ಸಾಹಿತ್ಯಿಕ ಮೈಲಿಗಲ್ಲಿನ ಅಧ್ಯಕ್ಷತೆಯನ್ನು ಮತ್ತು ಕೃತಿ ಬಿಡುಗಡೆಯ ಜವಾಬ್ದಾರಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಾರಥಿ ಡಾ. ಎಂ. ಮೋಹನ ಆಳ್ವ ಅವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎಕ್ಸಲೆಂಟ್ ಮೂಡುಬಿದಿರೆಯ ಆಡಳಿತ ನಿರ್ದೇಶಕ ಡಾ. ಬಿ.ಪಿ. ಸಂಪತ್ ಕುಮಾರ್ ಉಪಸ್ಥಿತರಿರಲಿದ್ದು,ಮೂಡುಬಿದಿರೆ ಕಸಾಪ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ. ಅವರು ಕೃತಿಯ ಆಳ-ಅಗಲಗಳನ್ನು ಓದುಗರಿಗೆ ಪರಿಚಯಿಸಲಿದ್ದಾರೆ.
ಕವಯಿತ್ರಿಗೆ ಶುಭ ಹಾರೈಸಲು ಹವ್ಯಾಸಿ ಬರಹಗಾರ್ತಿ ಆಶಾ ಉಜಿರೆ, ಗೌರವ ಉಪಸ್ಥಿತರಾಗಿ ಅಳದಂಗಡಿಯ ಆಮಂತ್ರಣ ಸೇವಾ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿಜಯಕುಮಾರ್ ಜೈನ್ ಹಾಗೂ ಕಾರ್ಯಕ್ರಮದ ಸುಂದರ ನಿರೂಪಣೆಯನ್ನು ಆಳ್ವಾಸ್ ಪಿ.ಯು. ಕಾಲೇಜಿನ ಕನ್ನಡ ವಿಭಾಗದ ಡಾ. ಸುಧಾರಾಣಿ ನಡೆಸಿಕೊಡಲಿದ್ದಾರೆ.
‘ಮಸಿಯ ಮಾತು’ ಕೇವಲ ಕಾಗದದ ಮೇಲಿನ ಅಕ್ಷರಗಳಲ್ಲ, ಅದು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಮನುಷ್ಯನಲ್ಲಿ ಸತ್ಚಿಂತನೆಗಳನ್ನು ಬಿತ್ತುವ ಪ್ರಬಲ ಮಾಧ್ಯಮವಾಗಿದೆ. ಅಕ್ಷರ ಮತ್ತು ಸಾಹಿತ್ಯವನ್ನು ಗೌರವಿಸುವ ಸಮಾಜ ಎಂದಿಗೂ ದಾರಿ ತಪ್ಪಲಾರದು ಎಂಬ ಆಶಯದೊಂದಿಗೆ, ಸೌಮ್ಯ ತಿಲಕ್ ಶೆಟ್ಟಿ ಮತ್ತು ತಿಲಕ್ ಶೆಟ್ಟಿ ಕುಟುಂಬಸ್ಥರು ಸಮಸ್ತ ಸಾಹಿತ್ಯಾಭಿಮಾನಿಗಳಿಗೆ ಈ ಅಕ್ಷರ ಜಾತ್ರೆಗೆ ಆತ್ಮೀಯ ಸ್ವಾಗತ ಕೋರಿದ್ದಾರೆ.
ವರದಿ : ಮಂದಾರ ರಾಜೇಶ್ ಭಟ್

