
ಗೋ ಸಂಕುಲ ಉಳಿದರೆ ದೇಶ ಉಳಿದೀತು–ರಾಘವೇಂದ್ರ ಭಂಡಾರ್ಕಾರ್
ಮೂಡುಬಿದಿರಿ : ಇಲ್ಲಿನ ಅಲಂಗಾರು ಗೋ ಮಾತಾ ಬ್ರಾಮರಿ ಸ್ವಸಹಾಯ ಸಂಘದ 5ನೇ ವಾರ್ಷಿಕೋತ್ಸವು ಈ ಬಾರಿ ಅಮೃತ ಸಾವಯವ ಮಳಿಗೆಯ ಅಶೋಕ ಭಂಡಾರಿಯವರ ಮನೆಯ ವಠಾರದಲ್ಲಿ ಯಶಸ್ವಿಯಾಗಿ ನೆರವೇರಿತು. ರತ್ನ ಭಂಡಾರಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜ್ಯೋತಿಷಿ ಮತ್ತು ವಾಸ್ತು ತಜ್ಞರಾದ ಮಾರೂರು ರಾಘವೇಂದ್ರ ಭಂಡಾರ್ಕರ್ ಅವರು ಗೊಪೂಜೆ, ಭಾರತ ಮಾತಾ ಸ್ಮರಣೆ,ಆರಾಧನೆ, ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ , ಅನಾರೋಗ್ಯ ಪೀಡಿತರಿಗೆ ಧನ ಸಹಾಯ ನೀಡುವಂತ ದೇವರು ಮೆಚ್ಚುವ ಕಾರ್ಯಗಳನ್ನು ಮಾಡುತ್ತಿದ್ದು, ಜೊತೆಗೆ ದೇಶಿಯ ಗೋ ಸಾಕಾಣಿಕೆ,ಸಾವಯವ ಗವ್ಯ ಉತ್ಪನ್ನಗಳ ಪರಿಚಯ, ಸಾವಯವ ಮುಂತಾದ ಸಮಾಜಮುಖಿ ಚಿಂತನೆಗಳನ್ನು ಕೂಡ ಅಳವಡಿಸಿಕೊಂಡು ಸ್ವ ಸಾಕ್ಷಾತ್ಕಾರದ ಜೊತೆಗೆ ಸುತ್ತ ಮುತ್ತಲಿನ ಪರಿಸರದಲ್ಲಿ ಸಾತ್ವಿಕ ಆರೋಗ್ಯಕರ ವಾತಾವರಣವನ್ನುoಟು ಮಾಡುತ್ತಿರುವ ಇಲ್ಲಿನ ಗೋ ಮಾತಾ ಬ್ರಾಮರಿ ಸ್ವ ಸಹಾಯ ಸಂಘದ ಕಾರ್ಯ ಅತ್ಯಂತ ಸ್ತುತ್ಯಾರ್ಹ ಎಂದರು.

ಯಾವುದೇ ಜಾತಿ, ಮತ, ಧರ್ಮದ ಜನರಿಗಾಗಲಿ ಹಾಲನ್ನು ಕರುಣಿಸುವುದರ ಮೂಲಕ ಪೋಷಣೆ, ರಕ್ಷಣೆಯನ್ನು ಮಾಡಿ ತನ್ನ ಜೀವನವನ್ನೇ ಪರೋಪಕಾರಕ್ಕಾಗಿ ಮೀಸಲಿಟ್ಟಿರುವ ಗೋಮಾತಾ ನಮಗೆಲ್ಲರಿಗೂ ಆದರ್ಶಮಯವಾಗಿದೆ..ಇಂತಹ ನಿರುಪದ್ರವಿ ಸಾಧು ಪ್ರಾಣಿಯಾದ ಗೋವನ್ನು ಆಹಾರಕ್ಕಾಗಿ ಹಿಂಸಿಸಿ ವಧಿಸುತ್ತಿರುವುದು ಶೋಚನೀಯ. ಗೋ ಸಂತತಿ ಉಳಿದರೆ ಮಾತ್ರ ದೇಶ ಉಳಿದೀತು, ಗೋವನ್ನು ರಾಷ್ಟ್ರೀಯ ಪ್ರಾಣಿ ಮಾಡಬೇಕೆಂಬ ಗೋಪ್ರೇಮಿಗಳ ಕೂಗನ್ನು ಕೇಂದ್ರ ಸರಕಾರ ಆಲಿಸಿ ಕೂಡಲೇ ಅದನ್ನು ಅನುಷ್ಠಾನಕ್ಜೆ ತರಬೇಕೆಂದು ಮಾರ್ಮಿಕವಾಗಿ ಹೇಳಿದರು.ಮುಂದೊಂದು ದಿನ ಇಲ್ಲಿನ ಸ್ವಸಹಾಯ ಸಂಘದ ಆಲ್ರೌಂಡ್ ಸಾಧನೆಯನ್ನು ನಮ್ಮ ಪ್ರಧಾನಿಗಳು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸದೆ ಇರಲಾರರು ಎಂದೂ ಭಂಡಾರ್ಕಾರ ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗೋ ಸೇವಾ ಸಂಯೋಜಕರುಗಳಾದ ಗೌತಮ್ ಮತ್ತು ಪ್ರೇಮ್ ಶಂಕರ್ ಅವರುಗಳು ಇಲ್ಲಿನ ಸ್ವಸಹಾಯಸಂಘದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರಲ್ಲದೆ ಸಂಘದ ಸದಸ್ಯರ ಅನುಭವಗಳನ್ನು ಮುಂದಿಟ್ಟುಕೊಂಡು ನೂತನವಾಗಿ ದೇಶಿಯ ಉತ್ಪನ್ನಗಳ ತಯಾರಿಕೆಯ ಕಡೆಗೆ ಗಮನಕೊಡಬೇಕೆಂದು ಮನವಿ ಮಾಡಿದರು.ಸಂಘದ ಅಧ್ಯಕ್ಷ ಸುರೇಂದ್ರ ಆಚಾರ್ಯ, ಕಾರ್ಯದರ್ಶಿ ಉಮೇಶ್ ಆಚಾರ್ಯ,ತುಕಾರಾಮ ಭಂಡಾರಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ನಿಶ್ಚಯ್ ಮತ್ತು ಯಶಸ್ ಇವರುಗಳನ್ನು ರೇಷ್ಮೆ ಶಾಲು ಹೊದಿಸಿ,ಹಾರ ಹಾಕಿ , ಗೌರವ ಧನ,ಫಲವಸ್ತುಗಳನ್ನು ನೀಡಿ ಸನ್ಮಾನಿಸಲಾಯ್ತು.ಸನ್ಮಾನ ಪತ್ರವನ್ನು ಕಿಶೋರ್ ಭಂಡಾರಿ, ಮತ್ತು ಸುಧಾಕರ ಆಚಾರ್ಯ ವಾಚಿಸಿದರು. ಅಲ್ಲದೆ ಅನಾರೋಗ್ಯ ಪೀಡಿತ ಚಿಂತನ್ ಅವರಿಗೆ ವೈದ್ಯಕೀಯ ಖರ್ಚುಗಳಿಗಾಗಿ ಧನ ಸಹಾಯವನ್ನು ಕೂಡ ಈ ವೇಳೆ ನೀಡಲಾಯ್ತು.ಸಂಘದ ಸದಸ್ಯ ಮೋಹನ್ ನಾಯ್ಕ ತಮ್ಮ ಅನುಭವವನ್ನು ಹಂಚಿಕೊಂಡರು.
ಉಮೇಶ್ ಆಚಾರ್ಯ ರವರು ವರದಿ ವಾಚನ ಮಾಡಿದರು.ಪ್ರಾರಂಭದಲ್ಲಿ ಗೋ ಪೂಜೆ ನಡೆಯಿತು. ನಂತರ ಭಾರತ್ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯ್ತು. ಸಾಮೂಹಿಕ ಪ್ರಾರ್ಥನೆ ಮತ್ತು ಓoಕಾರ ಪಠಣೆ ಮತ್ತು ಅಮೃತ ವಚನ ಪಠಣ ನಡೆಯಿತು.
ಸುರೇಂದ್ರ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಮೃತ ಸಾವಯವ ಮಳಿಗೆಯ ಅಶೋಕ್ ಭಂಡಾರಿಯವರು ಸಂಘ ಬೆಳೆದು ಬಂದ ದಾರಿಯ ಬಗ್ಗೆ ಬೆಳಕು ಚೆಲ್ಲಿ ಪ್ರಾಸ್ಥಾವಿಕವಾಗಿ ಮಾತನಾಡಿದರು.ಸುಜಿತ್ ಕಾರ್ಯಕ್ರಮ ನಿರ್ವಹಿಸಿದರು.ನಾಗೇಶ್ ಪೂಜಾರಿ ಧನ್ಯವಾದ ಅರ್ಪಿಸಿದರು.
