ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0
9

ಮಂಗಳೂರು: ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘ ನಿಯಮಿತದ ವಾರ್ಷಿಕ ಸದಸ್ಯರ ಮಹಾಸಭೆಯು ನಗರದ ಸೆಂಟ್ ಜೋಸೆಫ್ ಸೆಂಟಿನರಿ ಮೆಮೊರಿಯಲ್ ಹಾಲ್, ಜೆಪ್ಪು ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷರು ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಸಂಘದ ಬಲವರ್ಧನೆ, ಸದಸ್ಯರ ಹಿತಾಸಕ್ತಿ ಹಾಗೂ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೌಲಭ್ಯಗಳನ್ನು ಒದಗಿಸುವ ಕುರಿತು ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಂಘದ ವತಿಯಿಂದ ಈಗಾಗಲೇ ಸದಸ್ಯರಿಗೆ ಮತ್ತು ಗ್ರಾಹಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಮತ್ತಷ್ಟು ವಿಸ್ತರಿಸುವ ಕುರಿತು ಚರ್ಚೆ ನಡೆಯಿತು.

ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಹೆಚ್ಚಿನ ಪೆಟ್ರೋಲ್ ಪಂಪ್‌ಗಳನ್ನು ಸ್ಥಾಪಿಸುವ ಸಾಧ್ಯತೆಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಲಾಯಿತು. ಸಂಘದ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಸದಸ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸಂಘದ ಸದಸ್ಯರ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಒಂಬತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಅಭಿವೃದ್ಧಿಗೆ ಹಾಗೂ ಸದಸ್ಯರ ಸೇವೆಗೆ ಕೊಡುಗೆ ನೀಡಿದವರನ್ನೂ ಸನ್ಮಾನಿಸಲಾಯಿತು.

ಸಂಘವು 50 ವರ್ಷಗಳ ಸೇವೆಯನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಇಷ್ಟು ವರ್ಷಗಳ ಕಾಲ ಸಂಘದ ಬೆಳವಣಿಗೆಗೆ ಸಹಕರಿಸಿದ ಸದಸ್ಯರು, ಪದಾಧಿಕಾರಿಗಳು ಹಾಗೂ ಹಿತೈಷಿಗಳಿಗೆ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಯಿತು. ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯ ವತಿಯಿಂದ ಸಂಘವು ಐವತ್ತು ವರ್ಷಗಳ ಕಾಲ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ನೀಡಲಾದ ಪುರಸ್ಕಾರದ ಬಗ್ಗೆಯೂ ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಸಭೆಯ ಆರಂಭದಲ್ಲಿ ಕಾರ್ಯದರ್ಶಿ ನಿಶಿತಾ ಅವರು ಲೆಕ್ಕಪತ್ರಗಳನ್ನು ಮಂಡಿಸಿ, ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ಬಳಿಕ ಸಂಘದ ವಿವಿಧ ವಿಷಯಗಳ ಕುರಿತು ಸದಸ್ಯರೊಂದಿಗೆ ಚರ್ಚೆ ನಡೆಸಿ, ಅಗತ್ಯ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷರಾದ ಸಿರಿಲ್ ಡಿಸೋಜಾ, ನಿರ್ದೇಶಕರಾದ ಬಬಿತಾ ಡಿಸೋಜಾ, ವಿದ್ಯಾ ಟೋರಸ್, ಜೇಮ್ಸ್ ಮಾಡ್ತಾ, ಪಿ.ಪಿ. ವರ್ಗೀಸ್, ಅನಿಲ್ ಡಿಸೋಜಾ, ವಸಂತ್ ಶೆಟ್ಟಿ, ರಾಜೇಶ್, ಭಾಸ್ಕರ್ ರಾವ್, ಚಂದ್ರಶೇಖರ್, ಆಲ್ವಿನ್ ಗಾಡ್ವಿನ್ ಪಿಂಟೋ, ಚಂದ್ರಶೇಖರ್ ಕೆ., ಎಡ್ವರ್ಡ್ ಆಲ್ವಿನ್ ಫೆರ್ನಾಂಡಿಸ್, ಸೌವಾದ್ ಎಂ., ವಿಶ್ವನಾಥ್ ಹಾಗೂ ಜಮಾಲುದ್ದೀನ್ ಸೇರಿದಂತೆ ಸಂಘದ ಸದಸ್ಯರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.