ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ಮೇಲೆ ದಾಳಿ

0
9

ಉಡುಪಿ : ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ಎಂಬಲ್ಲಿ ಸರಕಾರಿ ಜಾಗದಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ಅಡಗುದಾಣದ ಮೇಲೆ ಬೈಂದೂರು ಪೊಲೀಸರು ದಾಳಿ ನಡೆಸಿ, ಅಂದಾಜು 16 ಲಕ್ಷ ರೂ. ಮೌಲ್ಯದ ವಾಹನ ಹಾಗೂ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಲ್ತೋಡು ಬೀಟ್ ಅಧಿಕಾರಿ ನೀಡಿದ ಖಚಿತ ಮಾಹಿತಿ ಆಧರಿಸಿ ಬೈಂದೂರು ಠಾಣೆಯ ಪಿಎಸ್ಐ ಸುನಿಲ್ ಕುಮಾರ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಬುಧವಾರ ಮಧ್ಯಾಹ್ನ ದಾಳಿ ನಡೆಸಿದ್ದಾರೆ.

ದಾಳಿ ವೇಳೆಯಲ್ಲಿ ಅಕ್ರಮ ಗಣಿಗಾರಿಕೆಗೆ ಬಳಸುತ್ತಿದ್ದ ಕೆಂಪುಕಲ್ಲು ತುಂಬಿದ 2 ಟಿಪ್ಪರ್ಗಳು, ಬ್ಲೇಡ್ ಅಳವಡಿಸಿದ್ದ 2 ಪವರ್ ಟಿಲ್ಲರ್ ಮೆಷಿನ್ಗಳು ಹಾಗೂ 2 ಕಲ್ಲು ಎತ್ತುವ ಟ್ರಾಲಿ ಮೆಷಿನ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರವೀಂದ್ರ ಪೂಜಾರಿ ಮತ್ತು ಸತೀಶ್ ಶೆಟ್ಟಿ ಎಂಬುವರ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.