ವಿಜಯ್ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಮತ್ತೊಬ್ಬ ಸ್ಟಾರ್ ನಟ

0
8

ತಮಿಳುನಾಡಿನ ಸಿಎಂ ಆಗಿ ವಿಜಯ್ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಮತ್ತೊಬ್ಬ ಸ್ಟಾರ್ ನಟ ಪ್ರಮಾಣ ವಚನ ಸ್ವೀಕರಿಸಿ ತಿಂಗಳಾಗುತ್ತಾ ಬರುತ್ತಿದೆ. ತಮಿಳುನಾಡು ವಿಧಾನಸಭೆಗೆ ಎರಡು ಕ್ಷೇತ್ರಗಳಿಂದ ವಿಜಯ್ ಸ್ಪರ್ಧಿಸಿದ್ದರು. ಪೆರಂಬೂರು ಮತ್ತು ತಿರುಚ್ಚಿ ಈಸ್ಟ್. ಎರಡೂ ಕ್ಷೇತ್ರಗಳಲ್ಲಿಯೂ ವಿಜಯ್ ದೊಡ್ಡ ಗೆಲುವು ಸಾಧಿಸಿದ್ದರು. ಆದರೆ ನಿಯಮದ ಅನ್ವಯ ಒಂದು ಕ್ಷೇತ್ರವನ್ನಷ್ಟೆ ಅವರು ಉಳಿಸಿಕೊಳ್ಳಬೇಕಿತ್ತು. ವಿಜಯ್ ಅವರು ತಿರುಚ್ಚಿ ಈಸ್ಟ್ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಪೆರಂಬೂರು ಕ್ಷೇತ್ರದ ಎಂಎಲ್​​ಎ ಎನಿಸಿಕೊಂಡು ಬಳಿಕ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇದೀಗ ವಿಜಯ್ ರಾಜಿನಾಮೆ ಕೊಟ್ಟ ತಿರುಚ್ಚಿ ಈಸ್ಟ್ ಕ್ಷೇತ್ರದಿಂದ ತಮಿಳಿನ ಮತ್ತೊಬ್ಬ ಸ್ಟಾರ್ ನಟ, ನಿರ್ದೇಶಕ ವಿಜಯ್ ಅವರ ಪಕ್ಷದಿಂದಲೇ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿಜಯ್ ರಾಜೀನಾಮೆಯಿಂದ ತೆರವಾಗಿರುವ ತಿರುಚ್ಚಿ ಈಸ್ಟ್ ಕ್ಷೇತ್ರದಿಂದ ತಮಿಳಿನ ಜನಪ್ರಿಯ ನಟ, ನಿರ್ದೇಶಕ ಮತ್ತು ಖ್ಯಾತ ಡ್ಯಾನ್ಸ್ ಕೊರಿಯಾಗ್ರಫರ್ ಸಹ ಆಗಿರುವ ರಾಘವ್ ಲಾರೆನ್ಸ್ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ವಿಜಯ್ ಹಾಗೂ ರಾಘವ್ ಲಾರೆನ್ಸ್ ಅವರ ಅಭಿಮಾನಿಗಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ರಾಘವ್ ಲಾರೆನ್ಸ್, ನಟ, ನಿರ್ದೇಶಕ ಮತ್ತು ಖ್ಯಾತ ಕೊರಿಯೋಗ್ರಾಫರ್ ಆಗಿರುವ ಜೊತೆಗೆ ದಶಕಕ್ಕೂ ಹೆಚ್ಚು ಸಮಯದಿಂದಲೂ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ವಿಕಲಚೇತನರು, ಅನಾಥರು, ವೃದ್ಧರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಾಘವ್ ಲಾರೆನ್ಸ್, ನೂರಾರು ಅನಾಥ ಮಕ್ಕಳಿಗೆ ಉತ್ತಮ ಶಿಕ್ಷಣ, ಜೀವನವನ್ನು ಅವರು ಕೊಡಿಸಿದ್ದಾರೆ. ರಾಘವ್ ಅವರ ಸಮಾಜ ಸೇವೆಯ ಬಗ್ಗೆ ಸಾರ್ವಜನಕವಾಗಿ ಬಹಳ ಒಳ್ಳೆಯ ಅಭಿಪ್ರಾಯವಿದೆ. ಈಗ ಅವರು ವಿಜಯ್ ಅವರ ಕ್ಷೇತ್ರದಿಂದ ಟಿವಿಕೆ ಪಕ್ಷದ ಪರವಾಗಿ ಚುನಾವಣೆ ಸ್ಪರ್ಧಿಸಿದಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.

ಅಂದಹಾಗೆ ಅದೇ ಈಸ್ಟ್ ತಿರುಚ್ಚಿ ಕ್ಷೇತ್ರದಿಂದ, ವಿಜಯ್ ಅವರ ಆಪ್ತರೂ ಆಗಿರುವ ನಟಿ ತ್ರಿಷಾ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅದು ಸುಳ್ಳು ಎನ್ನಲಾಗುತ್ತಿದೆ. ಈಗ ಹರಿದಾಡುತ್ತಿರುವ ರಾಘವ್ ಲಾರೆನ್ಸ್ ಸ್ಪರ್ಧೆ ಮಾಡುವ ಸುದ್ದಿ ಸಹ ಇನ್ನೂ ಖಾತ್ರಿ ಆಗಿಲ್ಲ. ಇನ್ನೂ ತಿರುಚ್ಚಿ ಈಸ್ಟ್ ಕ್​ಷೇತ್ರದ ಚುನಾವಣೆ ಘೋಷಣೆ ಆಗಿಲ್ಲವಾದ್ದರಿಂದ ಅಭ್ಯರ್ಥಿ ಘೋಷಣೆಗೆ ಇನ್ನೂ ಸಮಯವಿದೆ. ವಿಜಯ್ ಅವರು ತಮ್ಮ ಆಪ್ತರನ್ನೇ ಈ ಕ್ಷೇತ್ರದಿಂದ ಅಭ್ಯರ್ಥಿ ಮಾಡುತ್ತಾರೆ ಎಂಬ ಸುದ್ದಿ ಇದೆ.

LEAVE A REPLY

Please enter your comment!
Please enter your name here