
ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ಆಚರಣೆಯ ಸಂದರ್ಭದಲ್ಲಿ ಸರ್ಕಾರದ ಕಟ್ಟುನಿಟ್ಟಿನ ಆದೇಶ ಹಾಗೂ ಶಿಷ್ಟಾಚಾರವನ್ನು ಗಾಳಿಗೆ ತೂರಿ ಬೇಜವಾಬ್ದಾರಿತನ ಪ್ರದರ್ಶಿಸಿರುವ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಹಾಗೂ ದೊಡ್ಡಮಳ್ತೆ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಗಳ ಅಧಿಕಾರಿಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ನಿಯಮಾವಳಿಗಳ ಪ್ರಕಾರ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಜಯಂತಿಗಳನ್ನು ಅತ್ಯಂತ ಘನತೆ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕು ಮತ್ತು ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂಬ ನಿಯಮವಿದೆ. ಆದರೆ ಸೋಮವಾರಪೇಟೆ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಕಚೇರಿಯ ಪ್ರಮುಖ ಅಧಿಕಾರಿಗಳೇ ಇಲ್ಲದೆ ಕೇವಲ ಕಾಟಾಚಾರಕ್ಕೆ ವಾಲ್ಮೀಕಿ ಜಯಂತಿಯನ್ನು ಮುಗಿಸಲಾಗಿದೆ. ವಿಶೇಷವಾಗಿ ಗೌಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಜಯಂತಿಯ ದಿನದಂದು ಸ್ವತಃ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಲಿ(PDO) ಅಥವಾ ಲೆಕ್ಕ ಸಹಾಯಕ ಮಂಜಪ್ಪ ಅವರಾಗಲಿ ಹಾಜರಿರಲಿಲ್ಲ. ಇನ್ನು ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯಲ್ಲೂ ಸಹ ಯಾವುದೇ ಜವಾಬ್ದಾರಿಯುತ ಅಧಿಕಾರಿಗಳು ಇರದೆ ಸಂಪೂರ್ಣ ನಾಪತ್ತೆಯಾಗಿದ್ದರು. ಅತ್ಯಂತ ಆಘಾತಕಾರಿ ವಿಷಯವೆಂದರೆ, ಈ ಎರಡೂ ಪಂಚಾಯತಿಗಳಲ್ಲಿ ಜವಾಬ್ದಾರಿಯುತ ಅಧಿಕಾರಿಗಳ ಬದಲಿಗೆ ಕೇವಲ ನೀರು ಗಂಟೆಗಳನ್ನು (ವಾಟರ್ ಮ್ಯಾನ್) ಇಟ್ಟುಕೊಂಡು ನಾಮಕಾವಸ್ತೆ ಜಯಂತಿ ಆಚರಿಸಿರುವುದು ಕಂಡುಬಂದಿದೆ.
ಇದು ಮಹರ್ಷಿ ವಾಲ್ಮೀಕಿ ಅವರಿಗೆ ಹಾಗೂ ಇಡೀ ಸಮಾಜಕ್ಕೆ ಮಾಡಿದ ಘೋರ ಅಪಮಾನ ಎಂದು ಕರವೇ. ಸ್ವಾಭಿಮಾನಿ ಸೇನೆ ಕಿಡಿಕಾರಿದೆ.
ಈ ಕುರಿತು ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಅವರು ತೀವ್ರವಾಗಿ ಪ್ರಶ್ನಿಸಿದ್ದು, “ಸಮಾಜಕ್ಕೆ ಮಹಾನ್ ಆದರ್ಶಗಳನ್ನು ನೀಡಿದ ಆದಿಕವಿ ವಾಲ್ಮೀಕಿ ಮಹರ್ಷಿಗಳ ಜಯಂತಿ ಎಂದರೆ ಈ ಅಧಿಕಾರಿಗಳಿಗೆ ಕೇವಲ ಒಂದು ರಜಾ ದಿನವೇ? ಇವರಿಗೆ ವಾಲ್ಮೀಕಿ ಮಹರ್ಷಿಗಳ ಆದರ್ಶಗಳು ಯಾಕೆ ಬೇಕಾಗಿಲ್ಲ? ಸಾರ್ವಜನಿಕ ತೆರಿಗೆ ಹಣದಿಂದ ಪ್ರತಿ ತಿಂಗಳು ಸಂಬಳ ಪಡೆಯುವ ಇಂತಹ ಅಧಿಕಾರಿಗಳಿಗೆ ಕನಿಷ್ಠ ಸಾಮಾಜಿಕ ಜವಾಬ್ದಾರಿ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರದ ನಿಯಮಗಳನ್ನು ಪಾಲಿಸದ ಇವರು ಕೇವಲ ಸಂಬಳಕ್ಕೆ ಮಾತ್ರ ಕೆಲಸ ಮಾಡುತ್ತಿದ್ದಾರೆಯೇ?” ಎಂದು ಆಕ್ರೋಶಭರಿತರಾಗಿ ಕೇಳಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲೂ ಇದೇ ರೀತಿ ಬೇರೆ ಬೇರೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಇತರೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ವಾಲ್ಮೀಕಿ ಜಯಂತಿಯಂದು ಗೈರಾಗಿರುವುದು ಬೆಳಕಿಗೆ ಬಂದಿದೆ.
ಅಧಿಕಾರಿಗಳು ಸುಳ್ಳು ದಾಖಲೆ ಸೃಷ್ಟಿಸುವುದನ್ನು ತಡೆಯಲು, ವಾಲ್ಮೀಕಿ ಜಯಂತಿ ದಿನದಂದು ಪಂಚಾಯತಿ ಕಚೇರಿಗಳಲ್ಲಿ ನಡೆದ ಆಚರಣೆಯ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಹಾಗೂ ಅಧಿಕಾರಿಗಳು ಗ್ರೂಪ್ಗಳಲ್ಲಿ ಹಂಚಿಕೊಂಡಿರುವ ಫೋಟೋಗಳನ್ನು ಹಿರಿಯ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸಬೇಕು. ಅಂದು ಕಚೇರಿಯಲ್ಲಿ ಯಾರೆಲ್ಲಾ ಹಾಜರಿದ್ದರು ಮತ್ತು ಅಧಿಕಾರಿಗಳು ಬಂದಿದ್ದರೇ ಇಲ್ಲವೇ ಎಂಬುದು ಸಿಸಿಟಿವಿ ತಪಾಸಣೆಯಿಂದ ಸತ್ಯ ಹೊರಬರಲಿದೆ.
ಆದ್ದರಿಂದ, ಕೊಡಗು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (CEO) ಹಾಗೂ ಸೋಮವಾರಪೇಟೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು (EO) ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ತಕ್ಷಣವೇ ಸಿಸಿಟಿವಿ ದೃಶ್ಯಗಳನ್ನು ಮುಟ್ಟುಗೋಲು ಹಾಕಿಕೊಂಡು ತನಿಖೆ ನಡೆಸಿ, ಕರ್ತವ್ಯ ಲೋಪ ಎಸಗಿರುವ ಗೌಡಳ್ಳಿ ಮತ್ತು ದೊಡ್ಡಮಳ್ತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಮತ್ತು ಲೆಕ್ಕ ಸಹಾಯಕ ಮಂಜಪ್ಪ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ತಾಲ್ಲೂಕಿನ ಇಲಾಖಾ ಶಿಷ್ಟಾಚಾರ ಉಲ್ಲಂಘಿಸಿದ ಗ್ರಾಮ ಪಂಚಾಯಿತಿ ಎಲ್ಲಾ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಘಟಕವು ಕಡ್ಡಾಯವಾಗಿ ಆಗ್ರಹಿಸಿದೆ. ತಪ್ಪಿದಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಸಂಘಟನೆಯ ವತಿಯಿಂದ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರಾಸಿಸ್ ಡಿಸೋಜ ಜಿಲ್ಲಾಧ್ಯಕ್ಷರು ಕರವೇ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲೆ ಎಚ್ಚರಿಸಿದ್ದಾರೆ.
