
ಸಂಗೀತ-ನೃತ್ಯ ಪರಸ್ಪರ ಪೂರಕ ಕಲೆಗಳು : ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ
ಮಂಗಳೂರು: ಸಂಗೀತ ಮತ್ತು ನೃತ್ಯ ಭಾರತೀಯ ಸಂಸ್ಕೃತಿಯ ಪ್ರಮುಖ ಕಲಾ ಪ್ರಕಾರಗಳಾಗಿದ್ದು, ಪರಸ್ಪರ ಪೂರಕವಾಗಿವೆ. ಕಲಾ ಸಂಸ್ಥೆಗಳು ತಮ್ಮ ವ್ಯಾಪ್ತಿಗೆ ಸೀಮಿತವಾಗದೆ ವಿವಿಧ ಕಲಾ ಪ್ರಕಾರಗಳ ವಿನಿಮಯಕ್ಕೆ ಅವಕಾಶ ಕಲ್ಪಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಕಲಾನುಭವ ದೊರೆಯುತ್ತದೆ ಎಂದು ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಭರತಾಂಜಲಿ (ರಿ.) ಕೊಟ್ಟಾರ, ಮಂಗಳೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಿದ್ದ ‘ಜಲತರಂಗ ಜುಗಲ್ಬಂದಿ’, ‘ಜಲಾಂಜಲಿ’ ಹಾಗೂ ‘ನೃತ್ಯಾಮೃತಂ-2026’ ಕಾರ್ಯಕ್ರಮದಲ್ಲಿ ಭರತಾಂಜಲಿ ವತಿಯಿಂದ ಪ್ರಸಿದ್ಧ ಜಲತರಂಗ ಕಲಾವಿದೆ ವಿದುಷಿ ಶಶಿಕಲಾ ದಾನಿ ಅವರನ್ನು ಸನ್ಮಾನಿಸಿ ಆಶೀರ್ವಚನ ನೀಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಕಲೆ, ಧರ್ಮ ಮತ್ತು ಆಧ್ಯಾತ್ಮಿಕ ಮೌಲ್ಯಗಳು ಪರಸ್ಪರ ಸಂಬಂಧ ಹೊಂದಿವೆ. ಸಂಗೀತ ಮತ್ತು ನೃತ್ಯವನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ನೃತ್ಯ ಕಲಿಸುವ ಸಂಸ್ಥೆಗಳು ಸಂಗೀತ ಕಾರ್ಯಕ್ರಮಗಳನ್ನು ಹಾಗೂ ಸಂಗೀತ ಕಲಿಸುವ ಸಂಸ್ಥೆಗಳು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ವಿವಿಧ ಕಲಾ ಪ್ರಕಾರಗಳ ಪರಿಚಯವಾಗುವುದರ ಜತೆಗೆ ಪ್ರೇಕ್ಷಕರಿಗೂ ವಿಭಿನ್ನ ಕಲಾ ಪ್ರಸ್ತುತಿಗಳನ್ನು ವೀಕ್ಷಿಸುವ ಅವಕಾಶ ದೊರೆಯುತ್ತದೆ ಎಂದರು.
ಜಲತರಂಗದಂತಹ ಕಲಾಪ್ರಕಾರಗಳ ಪ್ರದರ್ಶನಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿವೆ. ಇಂತಹ ಕಲಾ ಪ್ರಕಾರಗಳಿಗೆ ವೇದಿಕೆ ಒದಗಿಸುವ ಮೂಲಕ ಹೊಸ ತಲೆಮಾರಿಗೆ ಅವುಗಳನ್ನು ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.
ಹುಬ್ಬಳ್ಳಿಯ ಕರ್ನಾಟಕ ಕಲಾಶ್ರೀ ವಿದುಷಿ ಶಶಿಕಲಾ ದಾನಿ ಹಾಗೂ ಬೆಂಗಳೂರಿನ ಡಾ. ಸುಜ್ಞಾನ ದಾನಿ ಜಲತರಂಗ ಜುಗಲ್ಬಂದಿ ನಡೆಸಿಕೊಟ್ಟರು. ಭರತಾಂಜಲಿಯ ಹಿರಿಯ ವಿದ್ಯಾರ್ಥಿಗಳು ವಿದುಷಿ ಪ್ರತಿಮಾ ಶ್ರೀಧರ್ ಮತ್ತು ವಿದುಷಿ ಪ್ರಕ್ಷಿಲಾ ಜೈನ್ ನಿರ್ದೇಶನದಲ್ಲಿ ವಿಷಯಾಧಾರಿತ ಪ್ರಸ್ತುತಿ ‘ಜಲಾಂಜಲಿ’ ನೃತ್ಯ ಪ್ರಸ್ತುತಪಡಿಸಿದರು. ಕಿರಿಯ ವಿದ್ಯಾರ್ಥಿಗಳಿಂದ ‘ನೃತ್ಯಾಮೃತಂ’ ಪ್ರದರ್ಶನ ನಡೆಯಿತು.
ಮುಖ್ಯ ಅತಿಥಿ ಅಗರಿ ಎಂಟರ್ಪ್ರೈಸಸ್ನ ರಾಘವೇಂದ್ರ ರಾವ್ ಮಾತನಾಡಿ, ಕಲಾ ಸಂಸ್ಥೆಗಳು ವಿವಿಧ ಕಲಾ ಪ್ರಕಾರಗಳಿಗೆ ಅವಕಾಶ ಕಲ್ಪಿಸುವುದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ವಿಭಿನ್ನ ಕಲಾ ಪ್ರಕಾರಗಳ ಪರಿಚಯವಾಗುತ್ತದೆ ಎಂದರು. ಈ ನಿಟ್ಟಿನಲ್ಲಿ ಭರತಾಂಜಲಿಯ ಕಾರ್ಯ ಅಭಿನಂದನೀಯ ಹಾಗೂ ಇತರ ಕಲಾ ಸಂಸ್ಥೆಗಳಿಗೆ ಮಾದರಿ ಎಂದರು.
ಭರತಾಂಜಲಿಯ ನಿರ್ದೇಶಕ ಗುರು ಶ್ರೀಧರ ಹೊಳ್ಳ, ನೃತ್ಯ ನಿರ್ದೇಶಕಿ ವಿದುಷಿ ಪ್ರತಿಮಾ ಶ್ರೀಧರ್, ಸಹ ಶಿಕ್ಷಕಿ ವಿದುಷಿ ಪ್ರಕ್ಷಿಲಾ ಜೈನ್, ಕಲಾವಿದರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಕಲಾಸಕ್ತರು ಉಪಸ್ಥಿತರಿದ್ದರು.
