Thursday, May 1, 2025
HomeUncategorizedಭೀಮ ಸಾರಥಿ ಪ್ರಶಸ್ತಿಗೆ ಅಶೋಕ್ ಕುಮಾರ್ ಶೆಟ್ಟಿ ಆಯ್ಕೆ

ಭೀಮ ಸಾರಥಿ ಪ್ರಶಸ್ತಿಗೆ ಅಶೋಕ್ ಕುಮಾರ್ ಶೆಟ್ಟಿ ಆಯ್ಕೆ

ಉಡುಪಿ, ಎ.8: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ನೀಡುವ 2025ನೇ ಸಾಲಿನ ಭೀಮ ಸಾರಥಿ ಪ್ರಶಸ್ತಿಗೆ ಶಿರ್ವ ಪೆರ್ನಾಲು ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ(61) ಆಯ್ಕೆಯಾಗಿದ್ದಾರೆ.

ಅರ್ಥ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಹಾಗೂ ಬೈಂದೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂರು ವರ್ಷಗಳ ಅವಧಿಗೆ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರು. 1991 ರಿಂದ ಕಳೆದ 32 ವರ್ಷಗಳಿಂದ ಸಮಗ್ರ ಗ್ರಾಮೀಣ ಆಶ್ರಮ ಸ್ವಯಂ ಸೇವಾ ಸಂಸ್ಥೆಯ ಮೂಲಕ ಕರ್ನಾಟಕ ರಾಜ್ಯದ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು ಜಿಲ್ಲೆಗಳ ಆದಿವಾಸಿ ಬುಡಕಟ್ಟು ಜನಾಂಗದವರಾದ ಕೊರಗ, ಜೇನು ಕುರುಬ, ಬೆಟ್ಟ ಕುರುಬ, ಯರವ, ಸೋಲಿಗೆ, ಮಲೆಕುಡಿಯ, ಹಸಲರು, ಗೊಂಡ, ಹಕ್ಕಿ ಪಿಕ್ಕಿ ಸಮುದಾಯಗಳನ್ನು ಸಂಘಟಿಸಿ ಅವರ ಸಬಲೀಕರಣಕ್ಕೆ ಶ್ರಮಿಸುತ್ತಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯ, ಜಾನಪದ ವಿಶ್ವವಿದ್ಯಾಲಯ ಹಾವೇರಿ, ನ್ಯಾಶನಲ್ ಲಾ ಸ್ಕೂಲ್ ಯುನಿವರ್ಸಿಟಿ ಬೆಂಗಳೂರು ಇವರ ಸಂಯೋಜನೆಯಲ್ಲಿ ಈ ಸಮುದಾಯಗಳ ಅಸ್ತಿತ್ವ, ಅಸ್ಮಿತೆ, ಅನನ್ಯತೆ, ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ಉಳಿಸಿಕೊಂಡು ಸಮಗ್ರ ಅಭಿವೃದ್ಧಿ ಮಾದರಿ ಕಂಡುಕೊಳ್ಳಲು ಹಲವಾರು ಅಧ್ಯಯನಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಬಹಳ ಮುಖ್ಯವಾಗಿ ಕೊರಗರ ಅಜಲು ನಿಷೇಧ ಕಾಯ್ದೆ, ಕೊರಗರ ಭೂಮಿ ಹೋರಾಟ, ಪಶ್ಚಿಮ ಘಟ್ಟ ವ್ಯಾಪ್ತಿಯ ಎಲ್ಲಾ ಸಮುದಾಯಗಳ ಅರಣ್ಯ ಹಕ್ಕು ಕಾಯ್ದೆ 2006ರ ಅನುಷ್ಠಾನಕ್ಕೆ ಹೋರಾಟ, ಪೌಷ್ಟಿಕ ಆಹಾರ ಅಭಿಯಾನ, ಶಾಲೆಗಳು, ಆಶ್ರಮ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟದ ಅಭಿಯಾನ, ಆರೋಗ್ಯ, ಉದ್ಯೋಗ ಖಾತ್ರಿ ಹೋರಾಟದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

2006ನೇ ಸಾಲಿನ ಕರ್ನಾಟಕ ಸರಕಾರ ನೀಡುವ ಬಾಬೂ ಜಗಜ್ಜೀವನ್ ರಾಂ ಪ್ರಶಸ್ತಿ, 2019ರ ಸಾಲಿನ ವಿಶ್ವ ಸಂಸ್ಥೆಯು ಪ್ರತೀ ವರ್ಷ ನೀಡುವ ಯು ಎನ್ ಹ್ಯಾಬಿಟ್ಯಾಟ್ ಗೋಲ್ಡನ್ ಅವಾರ್ಡ್‌ಗೆ ಇವರು ಭಾಜನರಾಗಿದ್ದಾರೆ.
ಈ ಪ್ರಶಸ್ತಿಯನ್ನು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ 134ನೇ ಜನ್ಮ ದಿನಾಚರಣೆ ಪ್ರಯುಕ್ತ ಎ.14ರಂದು ಕುಂದಾಪುರ ಲಯನ್ಸ್ ಸ್ಕ್ವೇರ್‌ನಲ್ಲಿ ನಡೆಯುವ ಭೀಮೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದ್ದಾರೆ .

RELATED ARTICLES
- Advertisment -
Google search engine

Most Popular