ದಿನಗೂಲಿ ಮಾಡುವ ತಾಯಿಯ ಶ್ರಮಕ್ಕೆ ಬೆಲೆ ತಂದ ‘ಮಾನ್ಯ’: ಪಿಯುಸಿಯಲ್ಲಿ ವಿಶೇಷ ಸಾಧನೆ

0
552

ಉಡುಪಿ: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದೆ. ಈಗಾಗಲೇ ಕೆಲವು ವಿದ್ಯಾರ್ಥಿಗಳು ತಮ್ಮ ತಮ್ಮ ಫಲಿತಾಂಶ ನೋಡಿ ಫುಲ್‌ ಖುಷಿಯಾಗಿದ್ದರೆ, ಇನ್ನೂ ಕೆಲವು ವಿದ್ಯಾರ್ಥಿಗಳು ಇನ್ನಷ್ಟು ಅಂಕಗಳು ಬೇಕಿತ್ತು ಎನ್ನುವ ಲೆಕ್ಕಾಚಾರದಲ್ಲಿಯೇ ಇದ್ದಾರೆ. ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೂಲಿ ಕೆಲಸ, ಲಾರಿ ಚಾಲಕರ ಮಕ್ಕಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಧನೆ ಯಾರೋ ಉಳ್ಳವರ ಸ್ವತ್ತಲ್ಲ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಉಡುಪಿ ಜಿಲ್ಲೆಯ ಎಸ್‌ಡಿಪಿಟಿ ಕಾಲೇಜಿನ ಮಾನ್ಯ ಎಸ್‌ ಪೂಜಾರಿ ಕೂಡ ಈ ಉದಾಹರಣೆಗೆ ಹೊರತಾಗಿಲ್ಲ.

ಶ್ರೀ ದುರ್ಗ ಪರಮೇಶ್ವರಿ ಟೆಂಪಲ್‌ ಪದವಿ ಪೂರ್ವ ಕಾಲೇಜು ಮಂದಾರ್ತಿಯಲ್ಲಿ ದ್ವಿತೀಯ ಪಿಯುಸಿ ಮುಗಿಸಿರುವ ಮಾನ್ಯ ಎಸ್‌ ಪೂಜಾರಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 95.16% ಪಡೆದಿದ್ದಾಳೆ. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿರುವ ಮಾನ್ಯ, ತಾಯಿಯ ಶ್ರಮಕ್ಕೆ ಇಂದು ಬೆಲೆ ತಂದು ಕೊಟ್ಟಿದ್ದಾಳೆ. ಮಾನ್ಯ ತಾಯಿ ಗೇರು ಬೀಜ ಕಾರ್ಖಾನೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದು, ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಓದಿಸುತ್ತಿದ್ದಾರೆ. ಸದ್ಯ ಮಾನ್ಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ತಾಯಿ ವಿನೋದ ಹಾಗೂ ತಾನು ಕಲಿತ ಶಿಕ್ಷಣ ಸಂಸ್ಥೆಗೆ ಹೆಮ್ಮೆ ಪಡುವಂತೆ ಮಾಡಿದ್ದಾಳೆ.

ಯಾವುದೇ ಟ್ಯೂಷನ್‌ಗೆ ಹೋಗದೇ ಕಾಲೇಜು ಪ್ರಾಧ್ಯಾಪಕರ ಸಹಾಯ ಪಡೆದು, ತಾನೇ ಹಗಲುಇರಳು ಶ್ರಮವಹಿಸಿ ಓದಿ ಉತ್ತಮ ಅಂಕ ಗಳಿಸಿರುವ ಮಾನ್ಯ ಸದ್ಯ ಮುಂದಿನ ಶಿಕ್ಷಣಕ್ಕಾಗಿ ಸಿ.ಎ(Chartered Accountant) ಮಾಡಲು ಹೆಜ್ಜೆ ಇಟ್ಟಿದ್ದಾಳೆ. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಮ್ಮ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿರುವ ಮಾನ್ಯಳಾ ಶ್ರಮಕ್ಕೆ ಶ್ರೀ ದುರ್ಗ ಪರಮೇಶ್ವರಿ ಟೆಂಪಲ್‌ ಪದವಿ ಪೂರ್ವ ಕಾಲೇಜು ಮಂದಾರ್ತಿಯ ಪ್ರಾಂಶುಪಾಲರು, ಭೋದಕ ಹಾಗೂ ಭೋದಕೇತರ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here