ಮಿಥ್ಯ ಚಲನಚಿತ್ರದ ಅತ್ಯುತ್ತಮ ಬಾಲ ನಟ ಪ್ರಶಸ್ತಿಯನ್ನು ಅತೀಶ್ ಎಸ್ ಶೆಟ್ಟಿ ಹಾಗೂ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ರೂಪಶ್ರೀ ವರ್ಕಾಡಿ ಪಡೆದುಕೊಂಡರು. ಸಂಬಂಧಿತ ಚಿತ್ರದ ನಿರ್ದೇಶಕ ಸುಮಂತ್ ಭಟ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಈರ್ವರೂ ತಮ್ಮ ಸಂತಸವನ್ನು ಹಂಚಿಕೊಂಡರು. ಮಿಥ್ಯ ಚಿತ್ರವನ್ನು ರಕ್ಷಿತ್ ಶೆಟ್ಟಿ ನಿರ್ಮಿಸಿದ್ದರು.
ರೂಪಶ್ರೀ ವರ್ಕಾಡಿ ಅವರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದವರಾಗಿದ್ದು ರಂಗ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲು ಅವರ ಸಂಸಾರದ ಸರ್ಕಸ್ ನಾಟಕದ ಮೂಲಕ ವೃತ್ತಿಪರ ರಂಗಭೂಮಿಗೆ ಆಗಮಿಸಿದ್ದರು. ಎರಡುವರೆ ದಶಕಗಳ ಸುಧೀರ್ಘ ಕಲಾಪಯಣದಲ್ಲಿ 700ಕ್ಕೂ ಹೆಚ್ಚು ನಾಟಕಗಳಲ್ಲಿ 4000ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದ್ದರು. ರೆಡ್ ಎಫೆಮ್ ತುಳು ಫಿಲಂ ಅವಾರ್ಡ್ಸ್, ಕೋಸ್ಟಲ್ ಫಿಲಂ ಅವಾರ್ಡ್, ಸ್ವರ್ಣ ಕಮಲ ಪ್ರಶಸ್ತಿ, ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳು, ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿಗಳನ್ನು ಗಳಿಸಿ ಪ್ರಸ್ತುತ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾತಂಡದಲ್ಲಿ ಅಭಿನಯಿಸುತ್ತಿದ್ದಾರೆ.
ಅತೀಶ್ ಶೆಟ್ಟಿ ಅವರು ದ ಕ ಜಿಲ್ಲೆಯ ಮಂಗಳೂರು ತಾಲೂಕಿನ ವಿಕರ್ಣ ಕಟ್ಟೆಯ ಕೊಂಡಾಣ ಸತೀಶ್ ಶೆಟ್ಟಿ ಹಾಗೂ ಭಾರತೀ ಶೆಟ್ಟಿ ಅವರ ಪುತ್ರ. ಜೂನಿಯರ್ ಡ್ರಾಮಾ ಫಂಟಲ್ ಶೋ ದಿಂದ ನಟನ ಜೀವನವನ್ನು ಪ್ರಾರಂಭಿಸಿದರು. ಮಜಾ ಭಾರತದಲ್ಲಿ ಉತ್ತಮವಾಗಿ ನಟಿಸಿ ಎರಡು ಬಾರಿ ಆಯ್ಕೆಗೊಂಡವರು. ರಿಷಬ್ ಶೆಟ್ಟಿ, ರಾಜೇಶ್, ಅನೂಪ್ ಭಂಡಾರಿ, ಸುಮಂತ್ ಭಟ್ ಅವರಿಂದ ಉತ್ತಮ ತರಬೇತಿಯನ್ನು ಪಡೆದರು. ಐದು ಬಾರಿ ನ್ಯಾಷನಲ್ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕವನ್ನು ರಾಜ್ಯಮಟ್ಟದಲ್ಲಿ ಪಡೆದುಕೊಂಡಿರುತ್ತಾನೆ. ಪ್ರಸ್ತುತ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಾ ಸ್ಪೋರ್ಟ್ಸ್ ಹಾಗೂ ಸಿನಿ ಪ್ರಪಂಚದಲ್ಲಿ ಮುಂದುವರೆಯುತ್ತಿದ್ದಾನೆ.

