ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳಿಂದ ಡೀಸೆಲ್ ಕಳವುಗೆ ಯತ್ನ: ಇಬ್ಬರ ಬಂಧನ

0
32

ನೆಲ್ಯಾಡಿ : ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಲಂಪಾಡಿ ಕ್ರಾಸ್ ಸಮೀಪ ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳಿಂದ ಡೀಸೆಲ್ ಕಳವು ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಬೊಲೆರೋ ಪಿಕ್‌ಅಪ್ ವಾಹನ, ಡೀಸೆಲ್ ಹಾಗೂ ಕಳವು ಮಾಡಲು ಬಳಸುತ್ತಿದ್ದ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸೆ.3ರಂದು ಮುಂಜಾನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಅಲಂಪಾಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ಸಮೀಪ ಬೊಲೆರೋ ಪಿಕ್‌ಅಪ್ ವಾಹನ ಅನುಮಾನಾಸ್ಪದವಾಗಿ ನಿಂತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ವಾಹನದ ಬಳಿ ಮೂವರು ವ್ಯಕ್ತಿಗಳು ಮುಖ ಮುಚ್ಚಿಕೊಂಡು ನಿಂತಿದ್ದುದನ್ನು ಗಮನಿಸಿದ ಪೊಲೀಸರು ಅವರತ್ತ ತೆರಳುತ್ತಿದ್ದಂತೆ ಆರೋಪಿಗಳು ಕತ್ತಲೆಯ ಪ್ರಯೋಜನ ಪಡೆದು ಪರಾರಿಯಾಗಲು ಯತ್ನಿಸಿದ್ದಾರೆ.

ಈ ವೇಳೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ರಾತ್ರಿ ವೇಳೆ ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳ ಡೀಸೆಲ್ ಟ್ಯಾಂಕ್‌ಗಳಿಂದ ಇಂಧನ ಕಳವು ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತರನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದ ಜೈಮುತ್ತ (23) ಹಾಗೂ ಮುತ್ತು (28) ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿ ಮಹಾದೇವ ಟಿ.ಕೆ. ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಬಂಧಿತ ಆರೋಪಿಗಳ ಮಾಹಿತಿ ಆಧರಿಸಿ ಪೊಲೀಸರು ನಡೆಸಿದ ಮಹಜರಿನಲ್ಲಿ ಸುಮಾರು 20 ಲೀಟರ್ ಡೀಸೆಲ್ ತುಂಬಿದ್ದ 35 ಲೀಟರ್ ಸಾಮರ್ಥ್ಯದ ಒಂದು ಕ್ಯಾನ್, 39 ಖಾಲಿ ಕ್ಯಾನ್‌ಗಳು, ಡೀಸೆಲ್ ಕಳವು ಮಾಡಲು ಬಳಸುತ್ತಿದ್ದ ರಬ್ಬರ್ ಪೈಪ್, ಟಾರ್ಪಲ್ ಸೇರಿದಂತೆ ಬೊಲೆರೋ ಪಿಕ್‌ಅಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಪಿಕ್‌ಅಪ್ ವಾಹನದ ಮೌಲ್ಯ ಸುಮಾರು ₹25 ಲಕ್ಷ, ಡೀಸೆಲ್ ಮೌಲ್ಯ ₹12 ಸಾವಿರ ಹಾಗೂ ಕ್ಯಾನ್‌ಗಳ ಮೌಲ್ಯ ಸುಮಾರು ₹16 ಸಾವಿರ ಎಂದು ಅಂದಾಜಿಸಲಾಗಿದೆ.

ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಪ್ಪಿನಂಗಡಿ ವೃತ್ತ ನಿರೀಕ್ಷಕ ನಾಗರಾಜ್ ಹೆಚ್.ಇ. ಅವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಸುತೇಶ್ ಕೆ.ಪಿ., ನೆಲ್ಯಾಡಿ ಹೊರಠಾಣೆಯ ಹೆಡ್ ಕಾನ್ಸ್‌ಟೇಬಲ್ ಶ್ರೀಧರ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ರವಿರಾಜ್ ಮತ್ತು ಸಂತೋಷ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.