ಮೂಡುಬಿದಿರೆ : ಶಿಕ್ಷಕರ ದಿನಾಚರಣೆಯ ಅಂಗವಾಗಿ SKPA ಮೂಡುಬಿದಿರೆ ವಲಯದ ವತಿಯಿಂದ ಶಿಕ್ಷಕಿ ಫೆಲ್ಸಿ ಡಿಸೋಜಾ ಅವರಿಗೆ ಸನ್ಮಾನ ಸಮಾರಂಭ ಗುರುವಾರ ಸಂಜೆ ಅಲಂಗಾರಿನ ಗೋಲ್ಡನ್ ಗೇಟ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕುಮಾರಿ ಫೆಲ್ಸಿ ಡಿಸೋಜ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಶಿಕ್ಷಕಿಯ ಶೈಕ್ಷಣಿಕ ಸೇವೆ, ವಿದ್ಯಾರ್ಥಿಗಳ ಬೆಳವಣಿಗೆಗೆ ನೀಡಿದ ಕೊಡುಗೆ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಗುರುತಿಸಿ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸುದರ್ಶನ್ ಮೂಡುಬಿದಿರೆ ಅವರು, ಶಿಕ್ಷಕರು ಸಮಾಜದ ಭವಿಷ್ಯವನ್ನು ರೂಪಿಸುವ ಪ್ರಮುಖ ಶಕ್ತಿಯಾಗಿದ್ದು, ವಿದ್ಯಾರ್ಥಿಗಳಿಗೆ ಜ್ಞಾನ ನೀಡುವುದರ ಜೊತೆಗೆ ಉತ್ತಮ ಮೌಲ್ಯಗಳು ಮತ್ತು ಜೀವನದ ಮಾರ್ಗದರ್ಶನವನ್ನು ನೀಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಶಿಕ್ಷಕರ ಸೇವೆಯನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
SKPA ಮೂಡುಬಿದಿರೆ ವಲಯದ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಹಂಚಿಕೊಂಡರು. ಸಮಾರಂಭದ ಅಧ್ಯಕ್ಷತೆಯನ್ನು ವಲಯಾಧ್ಯಕ್ಷ ನಿತಿನ್ ಬೆಳುವಾಯಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ ಕೋಟ್ಯಾನ್, ಜಿಲ್ಲಾ ಕಟ್ಟಡ ಸಮಿತಿ ಸದಸ್ಯ ವಿಲ್ಫ್ರೆಡ್ ಮೆಂಡೋನ್ಸ, ವಲಯ ಗೌರವಾಧ್ಯಕ್ಷ ಉದಯ್ ಕುಮಾರ್ ಭಟ್, ಉಪಾಧ್ಯಕ್ಷ ರಂಜಿತ್ ಕೋಟ್ಯಾನ್, ಕಾರ್ಯದರ್ಶಿ ನಮಿತ್ ಬಂಗೇರ, ಕೋಶಾಧಿಕಾರಿ ಪದ್ಮನಾಭ ಮಿಜಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
SKPA ಮೂಡುಬಿದಿರೆ ವಲಯದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಸೌಹಾರ್ದಯುತವಾಗಿ ನಡೆಯಿತು. ಕಾರ್ಯಕ್ರಮದ ಬಳಿಕ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

