ಮೂಡುಬಿದಿರೆ : ಐತಿಹಾಸಿಕ ಹಾಗೂ ವಿಶ್ವವಿಖ್ಯಾತ ಸಾವಿರ ಕಂಬಗಳ ಬಸದಿ ಇನ್ನು ಮುಂದೆ ವಿಶೇಷ ದೀಪಾಲಂಕಾರದ ಮೂಲಕ ಭಕ್ತರು ಹಾಗೂ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸಲಿದೆ.
ಬಸದಿಯ ಐತಿಹಾಸಿಕ ವಾಸ್ತುಶಿಲ್ಪಕ್ಕೆ ಮೆರುಗು ನೀಡುವ ಉದ್ದೇಶದಿಂದ ವಿಶೇಷ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದ್ದು, ಆಗಸ್ಟ್ 15ರಿಂದ ಪ್ರತಿ ಭಾನುವಾರ ಸಂಜೆ ಸಾರ್ವಜನಿಕರಿಗೆ ದೀಪಾಲಂಕಾರದ ಸೌಂದರ್ಯ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ವಿವಿಧ ದೀಪಗಳ ಮನಮೋಹಕ ಬೆಳಕಿನಲ್ಲಿ ಸಾವಿರ ಕಂಬಗಳ ಬಸದಿ ಮತ್ತಷ್ಟು ಭವ್ಯವಾಗಿ ಕಂಗೊಳಿಸಲಿದ್ದು, ಸಂಜೆ ವೇಳೆ ಬಸದಿಯ ವಾಸ್ತುಶಿಲ್ಪ ಹಾಗೂ ಕಲಾತ್ಮಕ ಕೆತ್ತನೆಗಳು ವಿಶೇಷವಾಗಿ ಗಮನ ಸೆಳೆಯಲಿವೆ. ಐತಿಹಾಸಿಕ ಪರಂಪರೆ, ಜೈನ ಧಾರ್ಮಿಕ ಮಹತ್ವ ಹಾಗೂ ವಾಸ್ತುಶಿಲ್ಪದ ವೈಶಿಷ್ಟ್ಯವನ್ನು ಒಂದೇ ಸಂದರ್ಭದಲ್ಲಿ ಕಣ್ತುಂಬಿಕೊಳ್ಳಲು ಇದು ಪ್ರವಾಸಿಗರಿಗೆ ಉತ್ತಮ ಅವಕಾಶವಾಗಲಿದೆ.
ಬಸದಿ ಆಡಳಿತ ಮಂಡಳಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಈ ವಿಶೇಷ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬಸದಿಯ ದೀಪಾಲಂಕಾರದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವಂತೆ ಮನವಿ ಮಾಡಿದೆ.

