ಮಳೆ ಅವಾಂತರ : ಕಂಕನಾಡಿಯಲ್ಲಿ ಮನೆ ಮೇಲೆ ಗೋಡೆ ಕುಸಿದು ಮೂವರು ಬಲಿ

0
38

ಮಂಗಳೂರು : ನಗರದ ಕಂಕನಾಡಿ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಮನೆ ಹಿಂಭಾಗದ ತಡೆಗೋಡೆ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಮಹಿಳೆಯೊಬ್ಬರು ಹಾಗೂ ಇಬ್ಬರು ಬಾಲಕಿಯರು ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ.

ಅವಘಡದಲ್ಲಿ ಒಬ್ಬ ಪುರುಷ ಹಾಗೂ ಇಬ್ಬರು ಮಕ್ಕಳನ್ನು ರಕ್ಷಣಾ ಸಿಬ್ಬಂದಿ ಅವಶೇಷಗಳಡಿಯಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದು, ಅವರ ಚಿಕಿತ್ಸೆಯು ಮುಂದುವರಿದಿದೆ.

ನೆರೆಮನೆಯವರ ಮಾಹಿತಿ ಪ್ರಕಾರ, ಮುಂಜಾನೆ ಸುಮಾರು 4 ಗಂಟೆ ಸುಮಾರಿಗೆ ಭಾರಿ ಶಬ್ದ ಕೇಳಿಬಂದಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿದಾಗ ಮನೆ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿರುವುದು ಕಂಡುಬಂದಿದೆ. ಆದರೆ, ಅಷ್ಟರಲ್ಲಾಗಲೇ ಮೂವರು ಮೃತಪಟ್ಟಿದ್ದು, ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ.

ಸ್ಥಳೀಯರ ಪ್ರಕಾರ, ಈ ಪ್ರದೇಶದಲ್ಲಿರುವ ಬಹುತೇಕ ಮನೆಗಳು ಬಾಡಿಗೆ ಮನೆಗಳಾಗಿದ್ದು, ಒಂದು ಕುಟುಂಬವನ್ನು ಹೊರತುಪಡಿಸಿ ಉಳಿದ ನಾಲ್ಕು ಕುಟುಂಬಗಳು ಈ ಪ್ರದೇಶದಲ್ಲಿ ವಾಸಿಸುತ್ತಿದ್ದವು. ಭಾರೀ ಮಳೆಯಿಂದ ತಡೆಗೋಡೆ ಕುಸಿದಿರುವುದೇ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದೆ..

LEAVE A REPLY

Please enter your comment!
Please enter your name here