ವಿಟ್ಲ,: ರಸ್ತೆ ಸುರಕ್ಷತೆ, ಮಾದಕ ವಸ್ತು ಹಾಗೂ ಪೋಸ್ಕೊ ಕಾನೂನು ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸರಕಾರಿ ಐಟಿಐ ವಿಟ್ಲ ಸಂಸ್ಥೆಯಲ್ಲಿ ನಡೆದ ಕಾರ್ಯಾಗಾರವು ಯಶಸ್ವಿಯಾಗಿ ಸಂಪನ್ನವಾಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ರಸ್ತೆ ನಿಯಮಗಳ, ಮಾದಕ ವಸ್ತು ಹಾಗೂ ಪೋಕ್ಸೋ ಕಾನೂನಿನ ಪ್ರಾಮುಖ್ಯತೆ ಬಗ್ಗೆ ಅರಿವು ಉಂಟುಮಾಡುವ ನಿಟ್ಟಿನಲ್ಲಿ ಈ ಕಾರ್ಯ ಕ್ರಮವು ರೂಪುಗೊಂಡಿತು.
ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಹರೀಶ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಿಟ್ಲ ಠಾಣೆಯ ಉಪನಿರೀಕ್ಷಕರಾದ ಶ್ರೀ ರತ್ನ ಕುಮಾರ್ ದೀಪ ಪ್ರಜ್ವಲಿಸಿದರು ಹಾಗೂ ಸಂಪನ್ಮೂಲವಕ್ತಿಯಾಗಿ ಶ್ರಿ ಹರೀಶ್ ,ಹೆಡ್ ಕಾನ್ಸ್ಟೇಬಲ್ ಆರಕ್ಷಕ ಠಾಣೆ ವಿಟ್ಲ ಅವರು ತಮ್ಮ ಭಾಷಣದಲ್ಲಿ, “ಪ್ರತಿದಿನ ರಸ್ತೆಯಲ್ಲಿ ಸಂಭವಿಸುತ್ತಿರುವ ಅಪಘಾತಗಳ ಪ್ರಮುಖ ಕಾರಣ ಪರವಾನಿಗೆ ಇಲ್ಲದ ಚಾಲನೆ ಮತ್ತು ನಿಯಮ ಉಲ್ಲಂಘನೆ. ಯುವಜನರು ಈ ಬಗ್ಗೆ ಹೆಚ್ಚಿನ ಜಾಗೃತಿಯಿಂದ ನಡೆದುಕೊಳ್ಳಬೇಕು” ಎಂದು ಹೇಳಿದರು.
ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಹೆಲ್ಮೆಟ್ ಬಳಕೆಯ ಅಗತ್ಯತೆ, ಸೀಟ್ ಬೆಲ್ಟ್ ಧರಿಸುವ ಮಹತ್ವ, ಮದ್ಯಪಾನ ಮತ್ತು ಚಾಲನೆಯ ಭಯಾನಕ ಪರಿಣಾಮಗಳ ಬಗ್ಗೆ ,ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದರೊಂದಿಗೆ ಇತರರಿಗೂ ತಿಳುವಳಿಕೆ ನೀಡುವುದು ಹಾಗೂ ಪೋಷಕ ಹಾಗೂ ಶಿಕ್ಷಕರೊಂದಿಗೆ ಸಹಕರಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ, ಮಾದಕ ವಸ್ತುವಿನಿಂದ ಅನೇಕ ದೈಹಿಕ, ಮಾನಸಿಕ, ಅನೇಕ ರೋಗಗಳ ಬಗ್ಗೆ ಕೊನೆಗೆ ಸಾವಿನ ಅಪಾಯ ಕುಟುಂಬದ ಮೇಲೆ ಪರಿಣಾಮ ಸಾಮಾಜಿಕ ಸಂಬಂಧ ಹಾಗೂ ಉದ್ಯೋಗದ ಮೇಲೆ ಪರಿಣಾಮ ಬಗ್ಗೆ ವಿಸ್ತೃತ ಅರಿವನ್ನು ಮೂಡಿಸಿದರು. ತದನಂತರ ನೈಜ ಘಟನೆಗಳ ಆಧಾರದ ಮೇಲೆ ನಡೆದ ಚರ್ಚೆ ಬಹಳ ಪರಿಣಾಮಕಾರಿಯಾಗಿತ್ತು.
ಕಾರ್ಯಕ್ರಮವು ವಿದ್ಯಾರ್ಥಿ ಹಿತೇಶ್ ಪ್ರಾರ್ಥನೆಯೊಂದಿಗೆ ಕಿರಿಯ ತರಬೇತಿ ಅಧಿಕಾರಿಗಳಾದ ಶ್ರೀಮತಿ ರತಿ ವಿ ಸ್ವಾಗತಿಸಿ, ಜೊಯ್ಲಿನ್ ಕ್ರಾಸ್ತ ನಿರೂಪಿಸಿದರು, ಶರತ್ ಕುಮಾರ್ ಎಸ್ ಎಚ್ ವಂದಿಸಿದರು ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಸಹಕರಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯ ಕ್ರಮವು ಸಂಪನ್ನಗೊಂಡಿತು.