ಬೃಹತ್ ಅಲೆಗಳ ಸುಳಿಗೆ ಸಿಲುಕಿದ ‘ಅಯಾನ್’ ಬೋಟ್ : ಆರು ಮೀನುಗಾರರ ರೋಚಕ ರಕ್ಷಣೆ

0
62

ಮಂಗಳೂರು : ಹಳೆ ಬಂದರಿನ ಅಳಿವೆಬಾಗಿಲು ಸಮೀಪ ತೀವ್ರ ಗಾಳಿ ಹಾಗೂ ಬೃಹತ್ ಅಲೆಗಳ ರಭಸಕ್ಕೆ ಸಿಲುಕಿದ ‘ಅಯಾನ್’ ಹೆಸರಿನ ಟ್ರಾಲರ್ ಬೋಟ್ ಮುಳುಗಡೆಯಾದ ಘಟನೆ ಶನಿವಾರ ಸಂಜೆ ನಡೆದಿದೆ. ಅದೃಷ್ಟವಶಾತ್ ಬೋಟ್‌ನಲ್ಲಿದ್ದ ಆರು ಮಂದಿ ಮೀನುಗಾರರನ್ನು ಸಮೀಪದಲ್ಲಿದ್ದ ಇತರ ಬೋಟ್‌ಗಳ ಮೀನುಗಾರರು ಸಮಯಪ್ರಜ್ಞೆಯಿಂದ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಬಂಟ್ವಾಳ ತಾಲೂಕಿನ ನಿವಾಸಿ ಇಬ್ರಾಹಿಂ ಖಲೀಲ್ ಮೂಸಾ ಅವರಿಗೆ ಸೇರಿದ ‘ಅಯಾನ್’ ಬೋಟ್ ಶನಿವಾರ ಸಂಜೆ ಮಂಗಳೂರು ಧಕ್ಕೆಯಿಂದ ‘ಕರೆ ಫಿಶಿಂಗ್’ಗೆ ತೆರಳಿತ್ತು. ಅಳಿವೆಬಾಗಿಲು ದಾಟಿದ ಕೆಲವೇ ಸಮಯದಲ್ಲಿ ಸಮುದ್ರದಲ್ಲಿ ತೀವ್ರ ಗಾಳಿ ಬೀಸಿದ್ದು, ಬೃಹತ್ ಅಲೆಗಳು ಬೋಟ್‌ಗೆ ಅಪ್ಪಳಿಸಿವೆ. ಅಲೆಗಳ ಹೊಡೆತಕ್ಕೆ ಬೋಟ್ ನಿಯಂತ್ರಣ ಕಳೆದುಕೊಂಡು ನೀರಿಗೆ ಮುಳುಗಲು ಆರಂಭಿಸಿದೆ.

ಬೋಟ್ ಮುಳುಗುತ್ತಿದ್ದ ಸಂದರ್ಭದಲ್ಲಿ ಅದರ ಮುಂಭಾಗ ನೀರಿನ ಮೇಲೆ ಕಾಣಿಸಿಕೊಂಡಿದ್ದು, ಈ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೋಟ್ ಅಪಾಯಕ್ಕೆ ಸಿಲುಕಿರುವುದನ್ನು ಗಮನಿಸಿದ ಸಮೀಪದಲ್ಲಿದ್ದ ಮೀನುಗಾರರು ಕೂಡಲೇ ರಕ್ಷಣಾ ಕಾರ್ಯಾಚರಣೆಗೆ ಮುಂದಾದರು. ಹಗ್ಗ ಹಾಗೂ ಇತರ ರಕ್ಷಣಾ ಸಾಧನಗಳ ನೆರವಿನಿಂದ ಬೋಟ್‌ನಲ್ಲಿದ್ದ ಆರು ಮಂದಿ ಮೀನುಗಾರರನ್ನು ತಮ್ಮ ಬೋಟ್‌ಗೆ ಸ್ಥಳಾಂತರಿಸಿ ಸುರಕ್ಷಿತವಾಗಿ ದಡಕ್ಕೆ ಕರೆತರಲಾಯಿತು.

ಘಟನೆಯ ಕುರಿತು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ದರ್ಶನಾ ಕೆ.ಟಿ. ಮಾಹಿತಿ ನೀಡಿದ್ದು, ಸ್ಥಳೀಯ ಮೀನುಗಾರರ ತ್ವರಿತ ಕಾರ್ಯಾಚರಣೆಯಿಂದಾಗಿ ಬೋಟ್‌ನಲ್ಲಿದ್ದ ಎಲ್ಲ ಆರು ಮಂದಿ ಸುರಕ್ಷಿತವಾಗಿದ್ದಾರೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

ತೀವ್ರ ಗಾಳಿ ಮತ್ತು ಬೃಹತ್ ಅಲೆಗಳ ನಡುವೆ ಸಮಯಪ್ರಜ್ಞೆಯಿಂದ ಕಾರ್ಯಾಚರಣೆ ನಡೆಸಿ ಆರು ಮಂದಿ ಮೀನುಗಾರರ ಜೀವ ಉಳಿಸಿದ ಸ್ಥಳೀಯ ಮೀನುಗಾರರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.