ಉಚಿತ ಟಿವಿ ಚಾನೆಲ್‌ಗಳ ಆಸೆ ತೋರಿಸಿ ಬ್ಯಾಂಕ್ ಖಾತೆಗೆ ಕನ್ನ

0
32

ಮಂಗಳೂರು : ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಎಲ್ಲಾ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ವೀಕ್ಷಿಸಬಹುದು ಎಂಬ ಜಾಹೀರಾತನ್ನು ನಂಬಿದ ವ್ಯಕ್ತಿಯೊಬ್ಬರು ₹1,78,191 ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರುದಾರರು ಅಕ್ಟೋಬರ್ 15ರಂದು ಫೇಸ್‌ಬುಕ್ ವೀಕ್ಷಿಸುತ್ತಿದ್ದಾಗ ‘ಎಕ್ಸ್‌ಎಂ ಟಿವಿ’ (XM TV) ಎಂಬ ಆ್ಯಪ್‌ನ ಜಾಹೀರಾತು ಕಾಣಿಸಿಕೊಂಡಿತ್ತು. ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಎಲ್ಲಾ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ವೀಕ್ಷಿಸಬಹುದು ಎಂಬ ಜಾಹೀರಾತನ್ನು ನಂಬಿ ಅವರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರು.

ಅಕ್ಟೋಬರ್ 16ರಂದು ದೂರುದಾರರ ಎರಡು ಬ್ಯಾಂಕ್ ಖಾತೆಗಳಿಂದ ಕ್ರಮವಾಗಿ ₹98,000 ಮತ್ತು ₹30,191 ಹಣ ವರ್ಗಾವಣೆಯಾಗಿತ್ತು. ಬಳಿಕ ಅಕ್ಟೋಬರ್ 17ರಂದು ಮತ್ತೊಮ್ಮೆ ₹50,000 ಹಣ ಅವರ ಗಮನಕ್ಕೆ ಬಾರದೆ ಅಪರಿಚಿತ ಖಾತೆಗೆ ವರ್ಗಾವಣೆಯಾಗಿತ್ತು. ಒಟ್ಟು ₹1,78,191 ಹಣ ಕಳೆದುಕೊಂಡಿದ್ದಾರೆ.

ಅಕ್ಟೋಬರ್ 18ರಂದು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಹಣ ಕಡಿತವಾಗಿರುವುದು ದೂರುದಾರರ ಗಮನಕ್ಕೆ ಬಂದಿದೆ. ಬಳಿಕ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪರಿಶೀಲನೆ ನಡೆಸಿದಾಗ ಮೊಬೈಲ್‌ನಲ್ಲಿ ಎಪಿಕೆ (APK) ಫೈಲ್ ಡೌನ್‌ಲೋಡ್ ಆಗಿರುವುದು ತಿಳಿದುಬಂದಿದೆ.

ಈ ಸಂಬಂಧ ದೂರು ದಾಖಲಿಸಿರುವ ಸಂತ್ರಸ್ತರು, ವಂಚನೆಯಲ್ಲಿ ಭಾಗಿಯಾಗಿರುವ ಅಪರಿಚಿತ ವ್ಯಕ್ತಿಯನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಸಾರ್ವಜನಿಕರಿಗೆ ಎಚ್ಚರಿಕೆ: ಉಚಿತ ಸೇವೆಗಳ ಆಮಿಷವೊಡ್ಡುವ ಅಪರಿಚಿತ ಜಾಹೀರಾತುಗಳನ್ನು ನಂಬಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ಅಧಿಕೃತ ಆ್ಯಪ್ ಸ್ಟೋರ್‌ಗಳ ಹೊರತಾಗಿ ಲಭ್ಯವಿರುವ APK ಫೈಲ್‌ಗಳನ್ನು ಇನ್‌ಸ್ಟಾಲ್ ಮಾಡುವ ಮೊದಲು ಎಚ್ಚರಿಕೆ ವಹಿಸಿ. ಅಪರಿಚಿತ ಆ್ಯಪ್‌ಗಳಿಗೆ ಬ್ಯಾಂಕಿಂಗ್ ಹಾಗೂ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ಅನುಮತಿಗಳನ್ನು ನೀಡಬೇಡಿ.