
ಬಂಟ್ಬಾಳ : ತಾಲ್ಲೂಕಿನ ವಿವಿಧೆಡೆ ಕಳೆದ ಎರಡು ದಿನಗಳಲ್ಲಿ ಭಾರೀ ಗುಡುಗು ಸಹಿತ ಮಳೆಯಾಗಿದ್ದು, ಹಲವು ಮನೆಗಳಿಗೆ ಸಿಡಿಲು ಬಡಿದು ಅಪಾರ ಪ್ರಮಾಣದ ಹಾನಿ ಉಂಟು ಮಾಡಿದೆ. ಇಲ್ಲಿನ ಪಂಜಿಕಲ್ಲು ಗ್ರಾಮದ ಅಮೈ ಬಳಿ ಗೋಪಾಲ ಪೂಜಾರಿ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್ ಪರಿಕರಗಳು ಸುಟ್ಟು ಕರಕಲಾಗಿದೆ. ಇದೇ ಗ್ರಾಮದ ಪಟ್ರಾಡಿ ನಿವಾಸಿ ಅಚ್ಚುತ ಆಚಾರ್ಯ ಎಂಬವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ.
ಉಳಿದಂತೆ ಮೂಡುಪಡುಕೋಡಿ ಗ್ರಾಮದ ಸೇವಾ ನಿವಾಸಿ ಜೋಹರ ಅಬ್ದುಲ್ ಜಬ್ಬಾರ್ ಎಂಬವರ ಮನೆಗೆ ಸಿಡಲು ಬಡಿದು ಹಾನಿಯಾಗಿದ್ದು, ಬಡಗಬೆಳ್ಳೂರು ಗ್ರಾಮದ ಪಲ್ಲಿಪಾಡಿ ನಿವಾಸಿ ಅಬ್ದುಲ್ ಹಮೀದ್ ಎಂಬವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಪರಿಕರಗಳಿಗೆ ಹಾನಿಯಾಗಿದೆ. ಬಿಳಿಯೂರು ಗ್ರಾಮದ ಮೈರಕಟ್ಟೆ ಅಜೀಜ್ ಎಂಬವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಇಡ್ಕಿದು ಗ್ರಾಮದ ಸೇಕೆ ಬ್ಯಾರಿ ಎಂಬವರ ಮನೆ ಮಾಡು ಕುಸಿದು ಬಿದ್ದು ಹಾನಿಯಾಗಿದ್ದು, ಕೆದಿಲ ಗ್ರಾಮದ ವಳಂಗಾಜೆ ನಿವಾಸಿ ಮಹಾಬಲೇಶ್ವರ ಭಟ್ ಇವರ ಮನೆಗೆ ತೆಂಗಿನ ಮರ ಬಿದ್ದು ಮನೆ ಮಾಡಿಗೆ ಹಾನಿ ಉಂಟಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
