ಉಡುಪಿ ಅಂಬಾಗಿಲು ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ : 34 ನೇ ವರ್ಷದ ಶ್ರೀ ಶಾರದಾ ಮೊಹೋತ್ಸವ

0
10

ಉಡುಪಿ : ಅಂಬಾಗಿಲು ವೈಶ್ಯವಾಣಿ ಸಮಾಜದ ಪುತ್ತೂರು ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನವರಾತ್ರಿ ಹಾಗೂ 34ನೇ ವರ್ಷದ ಶ್ರೀ ಶಾರದಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ಮಹೋತ್ಸವದ ಅಂಗವಾಗಿ ಅಕ್ಟೋಬರ್ 21ರಂದು ಶ್ರೀ ಶಾರದಾ ದೇವಿಯ ವಿಸರ್ಜನಾ ಶೋಭಾಯಾತ್ರೆ ನಡೆಸಿ, ಕಲ್ಯಾಣಪುರದ ಸ್ವರ್ಣ ನದಿಯಲ್ಲಿ ದೇವಿಯ ವಿಗ್ರಹದ ಜಲಸ್ತಂಭನ ನೆರವೇರಿಸಲಾಯಿತು.

ಮಹೋತ್ಸವದ ಪ್ರಯುಕ್ತ ದೇವಿಯ ಸನ್ನಿಧಿಯಲ್ಲಿ ಪ್ರತಿದಿನ ಭಜನೆ, ದೇವರಿಗೆ ವಿಶೇಷ ಅಲಂಕಾರ, ಚಂಡಿಕಾ ಯಾಗ, ದೀಪ ನಮಸ್ಕಾರ, ದುರ್ಗಾ ನಮಸ್ಕಾರ ಹಾಗೂ ಸಮಾರಾಧನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.

ದೇವಳದ ತಂತ್ರಿಗಳಾದ ಶ್ರೀನಿವಾಸ ತಂತ್ರಿಗಳು ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿದರೆ, ಪ್ರಧಾನ ಅರ್ಚಕರಾದ ರಾಘವೇಂದ್ರ ಭಟ್ ಅವರು ಮಹಾಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಮುಕ್ತೇಸರರಾದ ಪಿ. ವಸಂತ ನಾಯಕ್, ರಾಜೇಶ್ ಶೇಟ್, ಕಿಶೋರ್ ಪಾಲ್, ರಾಘವೇಂದ್ರ ಗಾಂವ್ಸ್ಕರ್, ಗಣೇಶ್ ಗಾಂಸ್ಕರ್ ಹಾಗೂ ದೇವಳದ ಪ್ರಮುಖರಾದ ಶಂಕರ್ ನಾಯಕ್, ಶಶಿಕಾಂತ್ ನಾಯಕ್, ವಿನೋದ್ ರಾಜ್, ದಿನಕರ್ ಗಾಂವ್ಸ್ಕರ್ ಉಪಸ್ಥಿತರಿದ್ದರು.

ಗುರುಸೇವಾ ಸಮಿತಿ, ಯುವಕ ಮಂಡಳಿ, ಮಹಿಳಾ ಮಂಡಳಿ ಹಾಗೂ ಭಜನಾ ಮಂಡಳಿಯ ಸದಸ್ಯರು ಸೇರಿದಂತೆ ನೂರಾರು ಸಮಾಜ ಬಾಂಧವರು ಪಾಲ್ಗೊಂಡು ಶಾರದಾ ಮಹೋತ್ಸವವನ್ನು ಯಶಸ್ವಿಗೊಳಿಸಿದರು. ಶಾರದಾ ದೇವಿಯ ವಿಸರ್ಜನಾ ಶೋಭಾಯಾತ್ರೆ ಹಾಗೂ ಜಲಸ್ತಂಭನದೊಂದಿಗೆ 34ನೇ ವರ್ಷದ ಶಾರದಾ ಮಹೋತ್ಸವವು ಸಂಪನ್ನಗೊಂಡಿತು.