ಬಂಟ್ವಾಳ : ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆಯ ಶಕುಂತಲಾ ಅವರು ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ದೊರೆಯುತ್ತಿದ್ದ ₹2,000 ಸಹಾಯಧನವನ್ನು ಉಳಿತಾಯ ಮಾಡಿ ಸ್ವಂತ ಉದ್ಯಮ ಆರಂಭಿಸುವ ಮೂಲಕ ಮಹಿಳಾ ಸ್ವಾವಲಂಬನೆಗೆ ಮಾದರಿಯಾಗಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವ ಶಕುಂತಲಾ ಅವರು ಕಳೆದ ಮೂರು ವರ್ಷಗಳಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಪಡೆದ ಹಣದಲ್ಲಿ ಒಟ್ಟು ₹72,000 ಉಳಿತಾಯ ಮಾಡಿದ್ದಾರೆ. ಈ ಹಣಕ್ಕೆ ಕುಟುಂಬದ ಉಳಿತಾಯವನ್ನು ಸೇರಿಸಿ ಒಟ್ಟು ₹2.50 ಲಕ್ಷ ವೆಚ್ಚದಲ್ಲಿ ‘ಶ್ರೀ ದುರ್ಗಾ ಗೃಹಲಕ್ಷ್ಮಿ ಟೆಕ್ಸ್ಟೈಲ್ಸ್ ಆ್ಯಂಡ್ ಗಾರ್ಮೆಂಟ್ಸ್’ ಎಂಬ ಬಟ್ಟೆ ಮಳಿಗೆಯನ್ನು ಸ್ಥಾಪಿಸಿದ್ದಾರೆ.
ನವರಾತ್ರಿ ಹಬ್ಬದ ಸಂದರ್ಭದಲ್ಲಿ ಗುರುವಾರ ನೂತನ ಮಳಿಗೆ ಉದ್ಘಾಟನೆಗೊಂಡಿತು. ಅಂಗಡಿಯಲ್ಲಿ ಎರಡು ಹೊಲಿಗೆ ಯಂತ್ರಗಳನ್ನು ಅಳವಡಿಸಲಾಗಿದ್ದು, ಬಟ್ಟೆ ವ್ಯಾಪಾರದ ಜೊತೆಗೆ ಹೊಲಿಗೆ ಕೆಲಸಕ್ಕೂ ವ್ಯವಸ್ಥೆ ಮಾಡಲಾಗಿದೆ.
ಗೃಹಲಕ್ಷ್ಮಿ ಯೋಜನೆಯ ಹಣವನ್ನು ದಿನನಿತ್ಯದ ಖರ್ಚಿಗೆ ಬಳಸದೆ, ಅದನ್ನು ಬಂಡವಾಳವನ್ನಾಗಿ ಪರಿವರ್ತಿಸಿ ಸ್ವಂತ ಉದ್ಯಮ ಆರಂಭಿಸಿರುವ ಶಕುಂತಲಾ ಅವರ ಪ್ರಯತ್ನ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತಮ ಉದಾಹರಣೆಯಾಗಿದೆ.
ಬಂಟ್ವಾಳ ತಾಲೂಕು ಐದು ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಹಾಗೂ ಜಿಲ್ಲಾ ಸಮಿತಿ ಉಪಾಧ್ಯಕ್ಷ ನಾರಾಯಣ ನಾಯ್ಕ ಅವರು ನೂತನ ಅಂಗಡಿಗೆ ಭೇಟಿ ನೀಡಿ ಶಕುಂತಲಾ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಯಂತಿ ವಿ. ಪೂಜಾರಿ ಅವರು, ಶಕುಂತಲಾ ಅವರ ಸಾಧನೆಯು ಇತರ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದು, ಮಹಿಳಾ ಸ್ವಾವಲಂಬನೆಗೆ ಉತ್ತಮ ಮಾದರಿಯಾಗಿದೆ ಎಂದು ತಿಳಿಸಿದರು.
ಶಕುಂತಲಾ ಅವರು ತಮ್ಮ ಪತಿ ಜಯಾನಂದ ಹಾಗೂ ವಿದ್ಯಾಭ್ಯಾಸ ಮಾಡುತ್ತಿರುವ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಪತಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಇದೀಗ ಸ್ವಂತ ಉದ್ಯಮದ ಮೂಲಕ ಕುಟುಂಬಕ್ಕೆ ಹೆಚ್ಚುವರಿ ಆದಾಯದ ಮೂಲವನ್ನು ಸೃಷ್ಟಿಸಿಕೊಳ್ಳಲು ಶಕುಂತಲಾ ಮುಂದಾಗಿದ್ದಾರೆ.
ಸರ್ಕಾರದ ಯೋಜನೆಯಡಿ ದೊರೆತ ಆರ್ಥಿಕ ನೆರವನ್ನು ಉಳಿತಾಯ ಮಾಡಿ ಸ್ವಂತ ಉದ್ಯಮ ಆರಂಭಿಸಿರುವ ಅವರ ಸಾಧನೆ ಇತರ ಮಹಿಳೆಯರಿಗೂ ಪ್ರೇರಣೆಯಾಗಿದೆ.

