ಗೋಣಿಕೊಪ್ಪ : ದಸರಾ ದಶಮಂಟಪ ಸಮಿತಿಯವರೊಂದಿಗೆ ವಿಶೇಷ ಸಭೆಯನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಮತ್ತು ಶ್ರೀ ಕಾವೇರಿ ದಸರಾ ಜನೋತ್ಸವದ ಅಧ್ಯಕ್ಷರೂ ಆಗಿರುವ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನಡೆಸಿದರು.
ಸಭೆಯಲ್ಲಿ ಪ್ರಮುಖವಾಗಿ ಈ ಬಾರಿಯ ದಸರಾ ಜನೋತ್ಸವ ಅತ್ಯಂತ ಉತ್ತಮವಾಗಿ ನಡೆಯುತ್ತಿರುವುದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಮಾನ್ಯ ಶಾಸಕರು, ದಸರಾ ಜನೋತ್ಸವದ ಕೊನೆಯ ದಿನ ನಡೆಯುವ ಶೋಭಾ ಯಾತ್ರೆಯ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಾ, ಸುರಕ್ಷತೆಯ ಬಗ್ಗೆ ಎಲ್ಲರೂ ಪ್ರಾಮುಖ್ಯತೆ ನೀಡುತ್ತಾ ಯಾವುದೇ ಅಹಿತರ ಘಟನೆಗಳು ಆಗದಂತೆ ಜಾಗೃತೆ ವಹಿಸಬೇಕೆಂದು ಕರೆ ನೀಡಿದರು.
ದಶಮಂಟಪ ಸಮಿತಿಗಳಿಗೆ ತಲಾ ₹ 2.5 ಲಕ್ಷಗಳ ಅನುದಾನವನ್ನು ನೀಡುವುದಾಗಿ ಘೋಷಿಸಿದ ಮಾನ್ಯ ಶಾಸಕರು, ಈ ಬಾರಿಯ ಶೋಭ ಯಾತ್ರೆಯಲ್ಲಿ ಉತ್ತಮವಾಗಿ ಮೂಡಿಬರುವ ತಂಡಕ್ಕೆ ₹ 1 ಲಕ್ಷ ಬಹುಮಾನದ ಮೊತ್ತ ನೀಡುವುದಾಗಿ ತಿಳಿಸಿದರು. ಈ ಬಾರಿಯ ದಸರಾ ಜನೋತ್ಸವವು ಹೀಗೆ ಮುಂದುವರೆದು ಜನರಿಗೆ ಮನರಂಜನೆ ನೀಡುವುದರೊಂದಿಗೆ ನಾಡಿನ ಸಮಸ್ತ ಜನತೆಗೆ ಒಳಿತಾಗಲಿ ಎಂದು ಹಾರೈಸಿದರು.
ಕಾವೇರಿ ದಸರಾ ಸಮಿತಿಯ ಕಾರ್ಯಧ್ಯಕ್ಷರಾದ ಪ್ರಮೋದ್ ಗಣಪತಿ, ಪ್ರಧಾನ ಕಾರ್ಯದರ್ಶಿ ಕಂದದೇವಯ್ಯ, ಪ್ರಧಾನ ಸಂಚಾಲಕರು ಬಿ ಎಂ ಪ್ರಕಾಶ್, ದಶಮಂಟಪ ಅಧ್ಯಕ್ಷರು ಚೇತನ್, ಹಾಗೂ ದಸರಾ ಸಮಿತಿಯ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಪ್ರಿತುನ್ ಪೂವಣ್ಣ

