ಬೆಳ್ತಂಗಡಿ : ಜೈನತೀರ್ಥ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಪ್ರೋತ್ಸಾಹಧನ ವಿತರಣೆ

0
4

ಉಜಿರೆ : ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ವಿನಯ, ನೈತಿಕತೆ ಮತ್ತು ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದು ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಅವರು ಸೋಮವಾರ ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ಜೈನತೀರ್ಥಕ್ಷೇತ್ರದಲ್ಲಿ ಕೆಲ್ಲಗುತ್ತು ಸಬ್ರಬೈಲು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮನವರ ಪುಣ್ಯತಿಥಿ ಆಚರಣೆ ಸಂದರ್ಭದಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ೭೫೮ ಜೈನವಿದ್ಯಾರ್ಥಿಗಳಿಗೆ ಇಪ್ಪತ್ತಮೂರು ಲಕ್ಷದ ಹನ್ನೊಂದು ಸಾವಿರದ ನೂರು ರೂ. ವಿದ್ಯಾರ್ಥಿವೇತನ ವಿತರಿಸಿ ಮಂಗಲ ಪ್ರವಚನ ನೀಡಿದರು.

ವಿದ್ಯಾರ್ಥಿ ಜೀವನದಲ್ಲೆ ಇಂದ್ರಿಯಗಳ ನಿಗ್ರಹದೊಂದಿಗೆ ಮನಸ್ಸು ಮತ್ತು ಬುದ್ಧಿಯನ್ನು ಪರಿಪಕ್ವವಾಗಿ ಬೆಳೆಸಿಕೊಂಡು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಿ  ರೂಪುಗೊಳ್ಳಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಇಂದ್ರಿಯಗಳ ದಾಸರಾಗದೆ ದೃಢಸಂಕಲ್ಪದೊAದಿಗೆ ಶ್ರದ್ಧಾ-ಭಕ್ತಿಯಿಂದ ಸಣ್ಣಸಣ್ಣ ವೃತ-ನಿಯಮಗಳ ಪಾಲನೆಯೊಂದಿಗೆ ಧರ್ಮದ ಮರ್ಮವನ್ನರಿತು ಆದರ್ಶ ಶ್ರಾವಕರಾಗಿ ಸಾರ್ಥಕ ಬದುಕು ನಡೆಸಿದರೆ ಜೀವನ ಪಾವನವಾಗುತ್ತದೆ. ದಾನ-ಧರ್ಮಾದಿ ಸತ್ಕಾರ್ಯಗಳೊಂದಿಗೆ ಆದಾಯದ ಸ್ಪಲ್ಪ ಭಾಗವನ್ನು ಸದ್ವಿನಿಯೋಗ ಮಾಡಿದಾಗ ಸಂಪತ್ತಿನ ಮೌಲ್ಯವೂ ಹೆಚ್ಚಾಗುತ್ತದೆ.

ಮೋಕ್ಷ ಪ್ರಾಪ್ತಿಯೇ ಜೀವನದ ಅಂತಿಮ ಗುರಿಯಾಗಿದ್ದು, ಆತ್ಮನಿಗಂಟಿದ ಸಕಲ ಪಾಪಕರ್ಮಗಳು ಮತ್ತು ಕಷಾಯಗಳ ನಿರ್ಮೂಲನೆಯಾದಾಗ ಆತ್ಮನೇ ಪರಮಾತ್ಮನಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ಬಸದಿಯ ಆಡಳಿತ ಸಮಿತಿ ಸದಸ್ಯ ಕೆ. ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.

ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ಸ್ವಾಗತಿಸಿದರು.

ಪೂಜ್ಯ ಸ್ವಾಮೀಜಿಯವರ ಪಾದಪೂಜೆ ನಡೆಸಲಾಯಿತು.

ಬೆಳ್ತಂಗಡಿ ನೋಟರಿ ಶಶಿಕಿರಣ್ ಜೈನ್ ಧನ್ಯವಾದವಿತ್ತರು.

 ಶಿಕ್ಷಕ ಧರಣೇಂದ್ರ ಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

ಭಗವಾನ್ ಶಾಂತಿನಾಥ ಸ್ವಾಮಿಗೆ ೧೦೮ ಕಲಶಗಳಿಂದ ಅಭಿಷೇಕ, ಮೂರೂ ಬಸದಿಗಳಲ್ಲಿ ಪಂಚಾಮೃತ ಅಭಿಷೇಕ, ಮಹಾಪೂಜೆ, ಪದ್ಮಾವತಿ ದೇವಿಗೆ ಅಲಂಕಾರ ಪೂಜೆ ಮತ್ತು ಬ್ರಹ್ಮಯಕ್ಷ ಪೂಜೆ ನಡೆಸಲಾಯಿತು.

ಡಾ. ಜೀವಂಧರ್ ಬಳ್ಳಾಲ್, ಕೆ. ರಾಜವರ್ಮ ಬಳ್ಳಾಲ್, ಸುಮತಿ ಕೆ.ಆರ್. ಬಳ್ಳಾಲ್, ವಿನಯಾ ಜೆ. ಬಳ್ಳಾಲ್ ,ಡಾ. ಪ್ರಿಯಾ ಬಳ್ಳಾಲ್, , ಮಣಿಮಾಲಾ ಬಳ್ಳಾಲ್, ದಿಲೀಪ್ ಬಳ್ಳಾಲ್, ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಮೆನೇಜರ್ ಎಂ. ಜಿನರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.