ಮಂಗಳೂರಿನಿಂದ ಭಾರತ ಗೌರವ ವಿಶೇಷ ಪ್ರವಾಸಿ ರೈಲು, ವಿಮಾನ ಪ್ರವಾಸ ಪ್ಯಾಕೇಜ್‌ಗಳು: ಐಆರ್‌ಸಿಟಿಸಿ

0
8

ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಮಂಗಳೂರಿನಿಂದ ಹೊರಡುವ ‘ಭಾರತ ಗೌರವ’ ವಿಶೇಷ ಪ್ರವಾಸಿ ರೈಲು ಹಾಗೂ ದೇಶೀಯ ವಿಶೇಷ ವಿಮಾನ ಪ್ರವಾಸ ಪ್ಯಾಕೇಜ್‌ಗಳನ್ನು ಪ್ರಕಟಿಸಿದೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಐಆರ್‌ಸಿಟಿಸಿ ಜಂಟಿ ಜನರಲ್ ಮ್ಯಾನೇಜರ್ (ಟೂರಿಸಂ) ಸ್ಯಾಮ್ ಜೋಸೆಫ್ ಪಿ. ಈ ಕುರಿತು ಮಾಹಿತಿ ನೀಡಿ, ಓಣಂ ರಜಾ ಪ್ರಯುಕ್ತ ಆಯೋಜಿಸಲಾಗಿರುವ ‘ಅಹಮದಾಬಾದ್ ಸಹಿತ ಗೋಲ್ಡನ್ ಟ್ರಯಾಂಗಲ್ ಭಾರತ ಗೌರವ ವಿಶೇಷ ಪ್ರವಾಸಿ ರೈಲು’ ಆಗಸ್ಟ್ 22, ರಂದು ಮಂಗಳೂರಿನ ಮೂಲಕ ಪ್ರಯಾಣ ಆರಂಭಿಸಿ, ಸೆಪ್ಟೆಂಬರ್ 1ರಂದು ಮರಳಲಿದೆ.

ಈ ಪ್ರವಾಸದಲ್ಲಿ ಅಹಮದಾಬಾದ್‌ನ ಸಾಬರ್ಮತಿ ಆಶ್ರಮ, ರಾಣಿ ಕಿ ವಾವ್, ಅಡಲಜ್ ಮೆಟ್ಟಿಲು ಬಾವಿ, ಏಕತಾ ನಗರದ ಸ್ಟ್ಯಾಚ್ಯೂ ಆಫ್ ಯುನಿಟಿ, ದೆಹಲಿಯ ಕೆಂಪುಕೋಟೆ, ರಾಜ್‌ಘಾಟ್, ಇಂಡಿಯಾ ಗೇಟ್, ಲೋಟಸ್ ಟೆಂಪಲ್, ಕುತುಬ್ ಮಿನಾರ್, ಆಗ್ರಾದ ತಾಜ್ ಮಹಲ್ ಹಾಗೂ ಜೈಪುರದ ಆಮೇರ್ ಕೋಟೆ, ಹವಾ ಮಹಲ್, ಸಿಟಿ ಪ್ಯಾಲೆಸ್ ಮತ್ತು ಜಂತರ್ ಮಂತರ್ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಎಕಾನಮಿ, ಸ್ಟ್ಯಾಂಡರ್ಡ್, ಕಂಫರ್ಟ್ ಹಾಗೂ ಸುಪೀರಿಯರ್ ಎಂಬ ನಾಲ್ಕು ವರ್ಗಗಳಲ್ಲಿ ಪ್ಯಾಕೇಜ್‌ಗಳನ್ನು ರೂಪಿಸಲಾಗಿದ್ದು, ಪ್ಯಾಕೇಜ್ ದರವು ಪ್ರತಿ ವ್ಯಕ್ತಿಗೆ ₹21,190 ರಿಂದ ₹52,870 ವರೆಗೆ ನಿಗದಿಪಡಿಸಲಾಗಿದೆ.

ಎಲ್ಲಾ ವರ್ಗಗಳ ಪ್ರಯಾಣಿಕರಿಗೆ ಪ್ರತಿದಿನ ಮೂರು ಹೊತ್ತು ಸಸ್ಯಾಹಾರಿ ಊಟ, ವಸತಿ, ಸ್ಥಳೀಯ ಸಾರಿಗೆ, ಫ್ರೆಶ್-ಅಪ್ ವ್ಯವಸ್ಥೆ, ಕೋಚ್ ಅಟೆಂಡೆಂಟ್, ಭದ್ರತಾ ಸಿಬ್ಬಂದಿ, ಪ್ರಯಾಣ ವಿಮೆ ಹಾಗೂ ಅನ್ವಯವಾಗುವ ಜಿಎಸ್‌ಟಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಇದರೊಂದಿಗೆ ಐಆರ್‌ಸಿಟಿಸಿ ಮಂಗಳೂರಿನಿಂದ ಎರಡು ವಿಶೇಷ ದೇಶೀಯ ವಿಮಾನ ಪ್ರವಾಸ ಪ್ಯಾಕೇಜ್‌ಗಳನ್ನೂ ಘೋಷಿಸಿದೆ. ಬೋಧಗಯಾ–ಕಾಶಿ–ಪ್ರಯಾಗರಾಜ್–ಅಯೋಧ್ಯೆ ಪ್ರವಾಸವು ಆಗಸ್ಟ್ 27ರಿಂದ ಸೆಪ್ಟೆಂಬರ್ 1ರವರೆಗೆ ನಡೆಯಲಿದ್ದು, ಪ್ರತಿ ವ್ಯಕ್ತಿಗೆ ₹31,000ರಿಂದ ಪ್ಯಾಕೇಜ್ ಆರಂಭವಾಗಲಿದೆ. ವಿಮಾನ ಪ್ರಯಾಣ, ವಸತಿ, ಊಟ, ಸ್ಥಳೀಯ ಸಾರಿಗೆ, ಪ್ರವಾಸ ಸಂಯೋಜಕರ ಸೇವೆ ಹಾಗೂ ಪ್ರಯಾಣ ವಿಮೆ ಈ ಪ್ಯಾಕೇಜ್‌ನಲ್ಲಿ ಒಳಗೊಂಡಿವೆ.

ಇನ್ನೊಂದು ಕಾಶ್ಮೀರ ವಿಮಾನ ಪ್ರವಾಸ ಪ್ಯಾಕೇಜ್ ಸೆಪ್ಟೆಂಬರ್ 12ರಿಂದ 17ರವರೆಗೆ ನಡೆಯಲಿದ್ದು, ಶ್ರೀನಗರ, ಗುಲ್ಮಾರ್ಗ್, ಸೋನಮಾರ್ಗ್ ಹಾಗೂ ಪಹಲ್ಗಾಮ್ ಪ್ರವಾಸವನ್ನು ಒಳಗೊಂಡಿದೆ. ಇದರ ಆರಂಭಿಕ ದರ ಪ್ರತಿ ವ್ಯಕ್ತಿಗೆ ₹51,200 ಆಗಿದ್ದು, ಈ ಪ್ಯಾಕೇಜ್‌ನಲ್ಲೂ ವಿಮಾನ ಪ್ರಯಾಣ, ವಸತಿ, ಊಟ, ಸ್ಥಳೀಯ ಸಾರಿಗೆ, ಪ್ರವಾಸ ಸಂಯೋಜಕರ ಸೇವೆ ಹಾಗೂ ಪ್ರಯಾಣ ವಿಮೆ ಒಳಗೊಂಡಿರುತ್ತದೆ ಎಂದು ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳ ಸಿಬ್ಬಂದಿಗೆ ಲೀವ್ ಟ್ರಾವೆಲ್ ಕನ್‌ಸೆಷನ್ (LTC) ಸೌಲಭ್ಯವೂ ಲಭ್ಯವಿದೆ.
ಪತ್ರಿಕಾಗೋಷ್ಠಿಯಲ್ಲಿ ಐಆರ್‌ಸಿಟಿಸಿ ಪ್ರಾದೇಶಿಕ ಕಚೇರಿ, ಎರ್ನಾಕುಳಂನ ಹಿರಿಯ ಕಾರ್ಯನಿರ್ವಾಹಕ ವಿನೋದ್ ನಾಯರ್ ಉಪಸ್ಥಿತರಿದ್ದರು.

ವರದಿ ರಾಯಿ ರಾಜ ಕುಮಾರ್