ಅ. 31ರವರೆಗೆ ದಾಖಲೆ ಸಲ್ಲಿಸಲು ಅವಕಾಶ!
ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಶೀಲನಾ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಗ್ರಾಹಕರಿಗೆ ರಾಜ್ಯ ಸರ್ಕಾರ ಮತ್ತೊಂದು ಅವಕಾಶ ಕಲ್ಪಿಸಿದೆ. ಮನೆಗೆ ಬೀಗ ಹಾಕಿದ್ದರಿಂದ ಅಥವಾ ಮನೆ ಖಾಲಿ ಇದ್ದ ಕಾರಣಕ್ಕೆ ಸಮೀಕ್ಷೆಯಿಂದ ಹೊರಗುಳಿದವರು ಅಕ್ಟೋಬರ್ 31ರೊಳಗೆ ತಮ್ಮ ಸಮೀಪದ ವಿದ್ಯುತ್ ಸರಬರಾಜು ಕಂಪನಿಯ (ಎಸ್ಕಾಂ) ಉಪವಿಭಾಗ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು.
ಮನೆಮನೆಗೆ ತೆರಳಿ ನಡೆಸುತ್ತಿರುವ ಪರಿಶೀಲನಾ ಸಮೀಕ್ಷೆಯಲ್ಲಿ ಅರ್ಹ ಫಲಾನುಭವಿಗಳು ಲಭ್ಯವಿಲ್ಲದ ಕಾರಣಕ್ಕೆ ಉಚಿತ ವಿದ್ಯುತ್ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ಶೇ. 97.5ರಷ್ಟು ಪರಿಶೀಲನೆ ಪೂರ್ಣ
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಭಾಗ್ಯಜ್ಯೋತಿ, ಕುಟೀರಜ್ಯೋತಿ ಮತ್ತು ಅಮೃತಜ್ಯೋತಿ ಯೋಜನೆಗಳ ಫಲಾನುಭವಿಗಳನ್ನೂ ಒಳಗೊಂಡಂತೆ ಒಟ್ಟು 74,29,773 ಮಂದಿ ಗೃಹಜ್ಯೋತಿ ಫಲಾನುಭವಿಗಳಿದ್ದಾರೆ. ಈ ಪೈಕಿ 72.40 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಪರಿಶೀಲನೆ ಪೂರ್ಣಗೊಂಡಿದ್ದು, ಒಟ್ಟು ಫಲಾನುಭವಿಗಳಲ್ಲಿ ಸುಮಾರು ಶೇ. 97.5ರಷ್ಟು ಪರಿಶೀಲನೆ ಮುಗಿದಿದೆ.
16.1 ಲಕ್ಷ ಮನೆಗಳಿಗೆ ಬೀಗ
ಸಮೀಕ್ಷೆಯ ವೇಳೆ ಸುಮಾರು 16.1 ಲಕ್ಷ ಮನೆಗಳಿಗೆ ಬೀಗ ಹಾಕಿರುವುದು ಹಾಗೂ 28,519 ಮನೆಗಳು ಖಾಲಿ ಇರುವುದು ಕಂಡುಬಂದಿದೆ. ಹೀಗಾಗಿ, ಈ ಮನೆಗಳ ಗ್ರಾಹಕರ ಪರಿಶೀಲನೆ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಬೆಸ್ಕಾಂ ಮನವಿಯ ಮೇರೆಗೆ ಸರ್ಕಾರ ಇದೀಗ ಅಂತಹ ಫಲಾನುಭವಿಗಳಿಗೆ ದಾಖಲೆ ಸಲ್ಲಿಸಲು ಅಂತಿಮ ಅವಕಾಶ ನೀಡಿದೆ.
ಅಕ್ಟೋಬರ್ 31ರೊಳಗೆ ಸಂಬಂಧಪಟ್ಟ ಎಸ್ಕಾಂ ಉಪವಿಭಾಗ ಕಚೇರಿಗೆ ತೆರಳಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪರಿಶೀಲನೆ ಪೂರ್ಣಗೊಳಿಸುವಂತೆ ಫಲಾನುಭವಿಗಳಿಗೆ ಸೂಚಿಸಲಾಗಿದೆ. ಅರ್ಹ ಗ್ರಾಹಕರು ಈ ಅವಕಾಶವನ್ನು ಬಳಸಿಕೊಂಡು ಗೃಹಜ್ಯೋತಿ ಯೋಜನೆಯ ಸೌಲಭ್ಯಕ್ಕೆ ಸಂಬಂಧಿಸಿದ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳುವಂತೆ ಬೆಸ್ಕಾಂ ಮನವಿ ಮಾಡಿದೆ.

