
ತಲಕಾವೇರಿ : ಕೊಡಗಿನ ಕುಲದೇವಿ, ಜೀವನದಿ ಮಾತೆ ಕಾವೇರಿ ಇಂದು ಪವಿತ್ರ ತಲಕಾವೇರಿಯ ತೀರ್ಥಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ್ದಾಳೆ.
ಮೇಷ ಲಗ್ನದ ಶುಭ ಮುಹೂರ್ತದಲ್ಲಿ ನಿಗದಿಯಂತೆ ೭.೫೦ಕ್ಕೆ ಸರಿಯಾಗಿ ಕಾವೇರಿ ತೀರ್ಥೋದ್ಭವ ಸಂಭವಿಸಿದೆ. ವೇದಘೋಷ, ಮಂತ್ರಘೋಷಗಳ ನಡುವೆ ತೀರ್ಥಕುಂಡಿಕೆಯಲ್ಲಿ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಉಕ್ಕಿ ಬಂದಿದ್ದಾಳೆ.
ತೀರ್ಥೋದ್ಭವದ ಕ್ಷಣದಲ್ಲಿ ‘ಜೈ ಕಾವೇರಿ ಮಾತಾ’ ಎಂಬ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ಸಾವಿರಾರು ಭಕ್ತರು ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಕಣ್ತುಂಬಿಕೊಂಡು ಪುನೀತರಾದರು.ವಿವಿಧ ಜಿಲ್ಲೆ , ರಾಜ್ಯಗಳಿಂದ ಜನರು ಅಮೃತ ಸದೃಶ್ಯಯಕ್ಕೆಸಾಕ್ಷಿಯಾದರು. ತೀರ್ಥೋದ್ಭವದ ಅಂಗವಾಗಿ ಮುಂಜಾನೆಯಲ್ಲೇ ತಲಕಾವೇರಿ ಹಾಗೂ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು.

ಅರ್ಚಕರ ವೃಂದವು ಬ್ರಹ್ಮಕುಂಡಿಕೆಗೆ ವಿಶೇಷ ಮಹಾಮಂಗಳಾರತಿ ಬೆಳಗಿ ಕಾವೇರಿ ಮಾತೆಗೆ ಕುಂಕುಮಾರ್ಚನೆ ಹಾಗೂ ಅಭಿಷೇಕಗಳನ್ನು ನೆರವೇರಿಸಿದರು. ತೀರ್ಥೋದ್ಭವವಾಗುತ್ತಿದ್ದಂತೆ ಅರ್ಚಕರು ಪವಿತ್ರ ತೀರ್ಥವನ್ನು ಭಕ್ತಾದಿಗಳ ಮೇಲೆ ಪ್ರೋಕ್ಷಿಸಿದರು. ತೀರ್ಥೋದ್ಭವಕ್ಕೂ ಮುನ್ನ ಸಾವಿರಾರು ಭಕ್ತರು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಮುಳುಗಿದ್ದು, ತಮ್ಮ ಪಿತೃಗಳಿಗೆ ತರ್ಪಣ ಹಾಗೂ ಪಿಂಡಪ್ರದಾನ ನೆರವೇರಿಸಿದರು. ಬಳಿಕ ತಲಕಾವೇರಿಗೆ ಆಗಮಿಸಿ ಬ್ರಹ್ಮಕುಂಡಿಕೆಯ ಪವಿತ್ರ ತೀರ್ಥವನ್ನು ಸಂಗ್ರಹಿಸಿ ಭಕ್ತಿಭಾವ ಮೆರೆದರು.
ಕೊಡವರು ತಮ್ಮ ಪರಂಪರೆಯ ಕುಪ್ಯಚಾಲೆ , ಹಾಗೂ ಮಹಿಳೆಯರು ಕೊಡವ ಪೊಡಿಯ(ಸೀರೆ) ಧರಿಸಿ ತಳಿಯತಕ್ಕಿ(ಅಕ್ಷತೆ) ,ಬೊಳ್ಚ (ದೀಪ) ಹಿಡಿದು ಕನ್ನಿ ಬಾಳೊ ಕಾವೇರಿ ಬಾಳೊ ಎಂಬ ಘೋಷವಾಕ್ಯದೊಂದಿಗೆ ಭಾಗಮಂಡಲದಿಂದ ತಲಕಾವೇರಿಯವರೆಗೆ ಕಾಲ್ನಡಿಗೆಯಲ್ಲಿ ತೆರಳಿದರು . ವಿವಿಧ ಭಿಗಗಳಿಂದ ಬಂದಂತಹ ಭಕ್ತರು ಕಾವೇರಿ ತೀರ್ಥವನ್ನು ಬಾಟಲಿ, ಹಂಡೆ , ಟ್ಯಾಂಕ್ಗಳಲ್ಲಿ ತುಂಬಿಕೊಂಡು ತಮ್ಮ ಊರುಗಳಿಗೆ ತೆಗೆದುಕೊಂಡು ಹೋಗಿ ಹಂಚುವುದು ಪ್ರತೀತಿ. ವಿವಿಧ ಸಂಘ ಸಂಸ್ಥೆಗಳು , ಸಮಿತಿಗಳಿಂದ ಅನ್ನ ಸಂತರ್ಪಣೆಗಳು ನೆರವೇರಿದವು .
ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ, ಕೊಡಗಿನ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ತಲಕಾವೇರಿ, ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಎನ್.ಪೃಥ್ವಿ ಸೇರಿದಂತೆ ತಕ್ಕ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು. ಕೊಡಗು ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ಮತ್ತು ಸಾರಿಗೆ ವ್ಯವಸ್ಥೆ ಮಾಡಿತು.
ವರದಿ: ಪ್ರಿತುನ್ ಪೂವಣ್ಣ
