ಉಡುಪಿ : ಹೆಬ್ರಿ ತಾಲೂಕಿನ ಕೂಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಳಂಜೆ ದೊಡ್ಡಮನೆ ಪ್ರದೇಶದಲ್ಲಿ ಕಪ್ಪು ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಬೇಳಂಜೆ ದೊಡ್ಡಮನೆ ನಿವಾಸಿ ಗಣೇಶ್ ಶೆಟ್ಟಿ ಅವರ ಮನೆಯ ಹಟ್ಟಿಯ ಹಿಂಭಾಗದಲ್ಲಿ ಕಪ್ಪು ಚಿರತೆ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಈ ಘಟನೆ ಬಳಿಕ ಸುತ್ತಮುತ್ತಲಿನ ನಿವಾಸಿಗಳು ಎಚ್ಚರಿಕೆ ವಹಿಸುವಂತಾಗಿದೆ. ಜನವಸತಿ ಪ್ರದೇಶದ ಸಮೀಪವೇ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಸಂಚರಿಸುವವರು ಹಾಗೂ ಜಾನುವಾರು ಸಾಕಣೆ ಮಾಡುತ್ತಿರುವವರು ಆತಂಕಗೊಂಡಿದ್ದಾರೆ.
ಚಿರತೆ ಕಾಣಿಸಿಕೊಂಡಿರುವ ಪ್ರದೇಶದ ಸುತ್ತಮುತ್ತ ಅರಣ್ಯ ಪ್ರದೇಶ ಹಾಗೂ ಕೃಷಿ ಜಮೀನುಗಳಿರುವುದರಿಂದ, ಚಿರತೆ ಮತ್ತೆ ಜನವಸತಿ ಪ್ರದೇಶದತ್ತ ಬರುವ ಸಾಧ್ಯತೆ ಇದೆ ಎಂಬ ಆತಂಕ ಸ್ಥಳೀಯರಲ್ಲಿದೆ. ವಿಶೇಷವಾಗಿ ಹಟ್ಟಿಗಳಲ್ಲಿ ಕಟ್ಟಿರುವ ಜಾನುವಾರುಗಳ ಸುರಕ್ಷತೆ ಬಗ್ಗೆಯೂ ಗ್ರಾಮಸ್ಥರು ಚಿಂತಿತರಾಗಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಚಿರತೆಯ ಚಲನವಲನ ಪತ್ತೆಹಚ್ಚಲು ಅಗತ್ಯವಿದ್ದಲ್ಲಿ ಕ್ಯಾಮೆರಾ ಸೇರಿದಂತೆ ಸೂಕ್ತ ವ್ಯವಸ್ಥೆ ಮಾಡಬೇಕು ಹಾಗೂ ಜನವಸತಿ ಪ್ರದೇಶದತ್ತ ಚಿರತೆ ಬಾರದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಯಾವುದೇ ಅನಾಹುತ ಸಂಭವಿಸುವ ಮುನ್ನ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿದು, ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಮುಖಂಡ ಅಮೃತ್ ಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.
ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ರಾತ್ರಿ ವೇಳೆ ಒಬ್ಬರೇ ಸಂಚರಿಸದೆ ಎಚ್ಚರಿಕೆ ವಹಿಸುವಂತೆ ಹಾಗೂ ಚಿರತೆ ಕಂಡುಬಂದಲ್ಲಿ ಅದನ್ನು ಹಿಂಬಾಲಿಸದೆ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

