ಉಡುಪಿ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಗೆ ಚಾಲನೆ ನೀಡಲಾಗಿದೆ. ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಪ್ರತಿಯೊಂದು ಮನೆಗೆ ಭೇಟಿ ನೀಡಿ ಗಣತಿ ನಡೆಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಲ್ಒಗಳು ಪ್ರತಿಯೊಬ್ಬ ಮತದಾರರಿಗೂ ಪೂರ್ವ ಮುದ್ರಿತ ವಿವರಗಳಿರುವ ಗಣತಿ ನಮೂನೆಯನ್ನು ದ್ವಿಪ್ರತಿಯಲ್ಲಿ ವಿತರಿಸಿ, ಭರ್ತಿ ಮಾಡಲು ಮಾರ್ಗದರ್ಶನ ನೀಡಲಿದ್ದಾರೆ. ಗಣತಿ ಸಮಯದಲ್ಲಿ ಮನೆಗೆ ಬೀಗ ಹಾಕಿದ್ದರೆ ಬಿಎಲ್ಒಗಳು ಕನಿಷ್ಠ 3 ಬಾರಿ ಭೇಟಿ ನೀಡುವುದು ಕಡ್ಡಾಯವಾಗಿದೆ. ಆದಾಗ್ಯೂ ಸಂಪರ್ಕಕ್ಕೆ ಸಿಗದ ಮತದಾರರನ್ನು ‘ಗೈರುಹಾಜರಿ, ಸ್ಥಳಾಂತರ, ಮರಣ, ನಕಲು’ ಎಂದು ಪಟ್ಟಿ ಮಾಡಿ ತಾಲೂಕು ಹಾಗೂ ಪಂಚಾಯಿತಿ ಕಚೇರಿಗಳಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗುವುದು. ಇವರನ್ನು ಕರಡು ಪಟ್ಟಿಗೆ ಸೇರಿಸಲಾಗುವುದಿಲ್ಲ ಎಂದು ಹೇಳಿದರು.
ಮತದಾರರು ಭರ್ತಿ ಮಾಡಿದ ನಮೂನೆ ಮತ್ತು ದಾಖಲೆಗಳನ್ನು ‘ಇಸಿಐ ನೆಟ್’ ಮೊಬೈಲ್ ಆಪ್ ಮೂಲಕ ಬಿಎಲ್ಒಗಳು ಸ್ಥಳದಲ್ಲೇ ಅಪ್ಲೋಡ್ ಮಾಡಲಿದ್ದಾರೆ. ಸಾರ್ವಜನಿಕರು ಕೂಡ ದಾಖಲೆಗಳೊಂದಿಗೆ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬಹುದು ಎಂದು ಹೇಳಿದರು.
ಶೇ. 92.5 ಮ್ಯಾಪಿಂಗ್ ಪೂರ್ಣ
ಜಿಲ್ಲೆಯ ಮತದಾರರ ಮ್ಯಾಪಿಂಗ್ ಕಾರ್ಯದಲ್ಲಿ ಶೇ.92.5ರಷ್ಟು ಪ್ರಗತಿ ಸಾಧಿಸಲಾಗಿದೆ. 2025ರ ಮತದಾರರ ಪಟ್ಟಿಯಲ್ಲಿದ್ದ ಒಟ್ಟು 10,64,524 ಮತದಾರರ ಪೈಕಿ 9,85,185 ಮತದಾರರನ್ನು ಅವರ ಸಂತತಿ ವಿವರಗಳೊಂದಿಗೆ ಯಶಸ್ವಿಯಾಗಿ ಜೋಡಣೆ ಮಾಡಲಾಗಿದೆ. ಇನ್ನು 79,339 ಮತದಾರರ ಮ್ಯಾಪಿಂಗ್ ಪ್ರಗತಿಯಲ್ಲಿದೆ. ಇದರಲ್ಲಿ 7615 ಮಂದಿ ಹೊರ ರಾಜ್ಯದವರು ಮತ್ತು 48226 ಮಂದಿ ಹೊರ ಜಿಲ್ಲೆಯ ನಿವಾಸಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಆ. 5ರಂದು ಕರಡು ಪಟ್ಟಿ ಪ್ರಕಟಣೆ
ಆ. 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಮತದಾರರ ಅರ್ಹತೆಯ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಆ. 5ರಿಂದ ಸೆಪ್ಟೆಂಬರ್ 4ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಹೊಸದಾಗಿ ಹೆಸರು ಸೇರಿಸುವವರು ನಮೂನೆ- 6, ಕ್ಷೇತ್ರ ಬದಲಾವಣೆ ಅಥವಾ ವಿಕಲಚೇತನ ವ್ಯಕ್ತಿಗಳ ಗುರುತಿಸುವಿಕೆಗೆ ನಮೂನೆ- 8 ಬಳಸಬಹುದು ಎಂದರು.
ರಾಜಕೀಯ ಪಕ್ಷಗಳ ಏಜೆಂಟರ ನೇಮಕ ಕಡ್ಡಾಯ
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಮಾನ್ಯತೆ ಪಡೆದ ಎಲ್ಲಾ ರಾಜಕೀಯ ಪಕ್ಷಗಳು ಪ್ರತಿಯೊಂದು ಮತಗಟ್ಟೆಗೆ ಒಬ್ಬರಂತೆ ಬೂತ್ ಮಟ್ಟದ ಏಜೆಂಟರನ್ನು ಕಡ್ಡಾಯವಾಗಿ ನೇಮಕ ಮಾಡಿ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಜನರಿಗೆ ಎಸ್ಐಆರ್ ಬಗ್ಗೆ ಮಾಹಿತಿ ನೀಡಲು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಮಾಹಿತಿ ಕೇಂದ್ರ ತೆರೆಯಲಾಗುವುದು ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಅಭಿದ್ ಗದ್ಯಾಳ ಉಪಸ್ಥಿತರಿದ್ದರು.

