
ಮಂಗಳೂರು : ತೃಷಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಹಾಗೂ ತೃಷಾ ಸಂಧ್ಯಾ ಕಾಲೇಜಿನ ಯೂತ್ ರೆಡ್ ಕ್ರಾಸ್ (YRC) ಘಟಕದ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಕಸ್ತೂರ್ಬಾ ಮೆಡಿಕಲ್ ಕಾಲೇಜು, ಕೆಎಂಸಿ ಆಸ್ಪತ್ರೆ ಅತ್ತಾವರ, ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದಲ್ಲಿ ಈ ಶಿಬಿರ ನಡೆಯಿತು.

ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸಂಧ್ಯಾ ರಾಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆಎಂಸಿ ಅತ್ತಾವರದ ರಕ್ತಕೇಂದ್ರದ ವೈದ್ಯಾಧಿಕಾರಿ ಡಾ. ಪ್ರೈಸ್ಲಿನ್, ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿಯ ಅಧ್ಯಕ್ಷೆ ಲಯನ್ ಡಾ. ವಿದ್ಯಾಧರಿ ಶೆಟ್ಟಿ, ರೀಜನ್ 12ರ ರೀಜನ್ ಚೇರ್‌ಪರ್ಸನ್ ಲಯನ್ ಆಶಾ ನಾಗರಾಜ್ ಹಾಗೂ 285 ರಕ್ತದಾನ ಶಿಬಿರಗಳನ್ನು ಸಂಘಟಿಸಿರುವ ಲಯನ್ ಎನ್.ಜೆ. ನಾಗೇಶ್ ಎಂ.ಜೆ.ಎಫ್. ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತೃಷಾ ಕಾಲೇಜಿನ ಐಕ್ಯೂಎಸಿ ಘಟಕದ ಕಾರ್ಯದರ್ಶಿ ಸಹನಾ ಶೆಟ್ಟಿ, ಯೂತ್ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಪ್ರೊ. ಶಿಲ್ಪಾ ಶೆಟ್ಟಿ ಹಾಗೂ ವೈಆರ್‌ಸಿ ಕಾರ್ಯದರ್ಶಿ ಚೈತನ್ಯ ಉಪಸ್ಥಿತರಿದ್ದರು.

ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ತಂಡದ ನೇತೃತ್ವದಲ್ಲಿ ಶಿಬಿರವನ್ನು ನಡೆಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಗೆ ಕೈಜೋಡಿಸಿದರು. ರಕ್ತದಾನದ ಮಹತ್ವವನ್ನು ಸಾರುವ ಹಾಗೂ ಅಗತ್ಯವಿರುವ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಆಯೋಜಿಸಲಾದ ಈ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಪ್ರಯತ್ನಕ್ಕೆ ಸಾಕ್ಷಿಯಾಯಿತು.
