ಬೆಳ್ತಂಗಡಿ : ದಸರಾ ಹಬ್ಬದ ಪ್ರಯುಕ್ತ ಮಂಗಳೂರಿಗೆ ಹುಲಿವೇಷ ತರಬೇತಿಗೆ ಆಗಮಿಸಿದ್ದ ಬೆಳ್ತಂಗಡಿ ಮೂಲದ 14 ವರ್ಷದ ಬಾಲಕ ಪಣಂಬೂರು ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ಘಟನೆಗೆ ತೆರೆ ಬಿದ್ದಿದ್ದು, ಸತತ ಶೋಧ ಕಾರ್ಯಾಚರಣೆಯ ಬಳಿಕ ಅ.6ರಂದು ಸಂಜೆ ಬಾಲಕನ ಮೃತದೇಹ ಪತ್ತೆಯಾಗಿದೆ.
ಬೆಳ್ತಂಗಡಿ ತಾಲೂಕಿನ ರೆಂಕೆದಗುತ್ತು, ಕಸಬಾ ಗ್ರಾಮದ ನಿವಾಸಿ ಶೇಷಪ್ಪ ಅವರ ಪುತ್ರ ಶ್ರೇಯಸ್ ಎಸ್. ಕುಂಬಾರ (14) ಮೃತ ಬಾಲಕ. ಅ.4ರಂದು ನಾಲ್ವರು ಅಪ್ರಾಪ್ತ ಸ್ನೇಹಿತರೊಂದಿಗೆ ದಸರಾ ಹಬ್ಬದ ಪ್ರಯುಕ್ತ ಮಂಗಳೂರಿಗೆ ಹುಲಿವೇಷ ತರಬೇತಿಗೆ ಶ್ರೇಯಸ್ ಬಂದಿದ್ದನು. ತರಬೇತಿ ಮುಗಿದ ಬಳಿಕ ಸ್ನೇಹಿತರೊಂದಿಗೆ ಸ್ಟೇಟ್ ಬ್ಯಾಂಕ್‌ನಿಂದ ಪಣಂಬೂರು ಬೀಚ್‌ಗೆ ತೆರಳಿದ್ದರು.
ಸಂಜೆ ಸುಮಾರು 4.30ರಿಂದ 5 ಗಂಟೆಯ ವೇಳೆಗೆ ಕೂರಿಕಟ್ಟ ಸಮುದ್ರ ತೀರಕ್ಕೆ ತೆರಳಿದ್ದ ಅವರು, ಸುಮಾರು 6 ಗಂಟೆಗೆ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಶ್ರೇಯಸ್ ನೀರಿನಲ್ಲಿ ಮುಳುಗಿ, ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದನು.
ಘಟನೆ ಬಳಿಕ ಬಾಲಕನ ಅಪ್ರಾಪ್ತ ಸ್ನೇಹಿತರು ಭಯಗೊಂಡು ಈ ವಿಚಾರವನ್ನು ಮನೆಯವರಿಗೆ ತಿಳಿಸಿರಲಿಲ್ಲ. ಅ.5ರಂದು ಬೆಳಗ್ಗೆ ವಿಷಯ ತಿಳಿದ ಬಳಿಕ ಬಾಲಕನ ತಂದೆ ಶೇಷಪ್ಪ ಅವರು ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 127/2026ರಂತೆ ಮನುಷ್ಯ ಕಾಣೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.
ಬಾಲಕನ ಪತ್ತೆಗಾಗಿ ಕರಾವಳಿ ಕಾವಲು ಪಡೆ, ಕೋಸ್ಟ್ ಗಾರ್ಡ್, ಲೈಫ್‌ಗಾರ್ಡ್‌ಗಳು, ಮುಳುಗು ತಜ್ಞರು ಹಾಗೂ ಸ್ಥಳೀಯ ಮೀನುಗಾರರ ಸಹಕಾರದಲ್ಲಿ ನಿರಂತರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಸಮುದ್ರ ವ್ಯಾಪ್ತಿಯ ಇತರ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡಲಾಗಿತ್ತು.
ಸತತ ಎರಡು ದಿನಗಳ ಶೋಧ ಕಾರ್ಯಾಚರಣೆಯ ಬಳಿಕ ಅ.6ರಂದು ಸಂಜೆ ಶ್ರೇಯಸ್‌ನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

