ಪುಸ್ತಕಗಳು ವ್ಯಕ್ತಿಯ ಜ್ಞಾನ ವಿಕಾಸಕ್ಕೆ ಪೂರಕವಾಗಿದ್ದು, ಯಶಸ್ವಿ ಜೀವನದ ಹಾದಿಯನ್ನು ತೋರಿಸುತ್ತವೆ : ಡಾ. ವಾಮನ್ ರಾವ್ ಬೇಕಲ್

0
17

ಮಂಗಳೂರು :́ ಪುಸ್ತಕಗಳು ವ್ಯಕ್ತಿಯ ಜ್ಞಾನ ವಿಕಾಸಕ್ಕೆ ಪೂರಕವಾಗಿದ್ದು, ಯಶಸ್ವಿ ಜೀವನದ ಹಾದಿಯನ್ನು ತೋರಿಸುತ್ತವೆ ಎಂದು ಗ್ರಂಥಾಲಯ ಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ಅಭಿಪ್ರಾಯಪಟ್ಟರು.

ಅವರು ವಾಚನ ವಾರಾಚರಣೆ ಅಂಗವಾಗಿ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಆಯೋಜಿಸಿದ್ದ “ವಿದ್ಯಾರ್ಥಿಗಳಿಗೆ ಪುಸ್ತಕಗಳೊಂದಿಗೆ ಸಂವಾದ” ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗರದ ಭಾಲಭವನ್ ವಿದ್ಯಾ ಕೇಂದ್ರದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಅರ್ಧ ದಿನದ ಸಂದರ್ಶನ ನಡೆಸಿ ವಿವಿಧ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಓದಿನಿಂದ ಮನಸ್ಸಿಗೆ ಸಂತೋಷ ಹಾಗೂ ಸಮಾಧಾನ ದೊರೆಯುವುದರ ಜೊತೆಗೆ ವಿಷಯದ ಅರಿವು ಮತ್ತು ಲೋಕಾನುಭವ ಪ್ರಾಪ್ತವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಡಾ. ವಾಮನ್ ರಾವ್ ಕರೆ ನೀಡಿದರು.

ಕಾರ್ಯಕ್ರಮವನ್ನು ಭಾಲಭವನ್ ವಿದ್ಯಾ ಸಂಸ್ಥೆಯ ಎಜುಕೇಷನಲ್ ಅಡ್ವೈಸರ್ ಹಾಗೂ ಕನ್ನಡ ಭವನದ ನಿರ್ದೇಶಕರಾದ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡ ಭವನವು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಉನ್ನತಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಡೆಸುತ್ತಿರುವ ಚಟುವಟಿಕೆಗಳು ಆಶಾದಾಯಕವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಹಾಗೂ ಕನ್ನಡ ಭವನದ ಗೌರವಾಧ್ಯಕ್ಷ ಪ್ರದೀಪ್ ಬೇಕಲ್ ವಹಿಸಿದ್ದರು. ಹಿರಿಯ ಭಜನಾ ಗುರು ಮತ್ತು ಕಲಾವಿದ ಜಯಾನಂದ ಕುಮಾರ್ ಹೊಸದುರ್ಗ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು. ಪತ್ರಕರ್ತ ಜಗನ್ನಾಥ್ ಶೆಟ್ಟಿ ವಿದ್ಯಾರ್ಥಿಗಳಿಗೆ ವರದಿ ತಯಾರಿಕೆಯ ಬಗ್ಗೆ ವಿಶೇಷ ತರಗತಿ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಭಾಲಭವನ್ ಮುಖ್ಯೋಪಾಧ್ಯಾಯಿನಿ ಲೀಲಾವತಿ ನಾಯರ್ ಹಾಗೂ ಅಧ್ಯಾಪಕಿ ದೀಪ್ತಿ ಅವರನ್ನು ಶಾಲು ಮತ್ತು ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು. ಅಲ್ಲದೆ ಶಾಲಾ ಗ್ರಂಥಾಲಯಕ್ಕೆ ₹1,000 ಮೌಲ್ಯದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.

ವಿದ್ಯಾರ್ಥಿಗಳಿಂದ ಅನಿಸಿಕೆ ವ್ಯಕ್ತಪಡಿಸುವಿಕೆ, ಗಾಯನ, ಪಿ.ಎನ್. ಪನಿಕ್ಕರ್ ಕುರಿತು ಭಾಷಣ, ವಾಚನ ವಾರಾಚರಣೆಯ ಮಹತ್ವದ ಬಗ್ಗೆ ಚರ್ಚೆ ಹಾಗೂ ಸಂವಾದ ಕಾರ್ಯಕ್ರಮಗಳು ಜರುಗಿದವು.

ಗ್ರಂಥಾಲಯ ಸಂಚಾಲಕಿ ಸಂಧ್ಯಾ ರಾಣಿ ಟೀಚರ್ ಸ್ವಾಗತಿಸಿದರು. ಕನ್ನಡ ಭವನದ ಕಾರ್ಯದರ್ಶಿ ವಸಂತ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಕೆ.ಸಿ.ಎನ್. ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here