ಕಾರ್ಕಳ : “ಆರೋಗ್ಯಪೂರ್ಣ ಆಹಾರ ಪದ್ಧತಿ” ಕಾರ್ಯಗಾರ

0
15

ಬೈಲೂರು : ಆಧುನಿಕ ಜೀವನ ಶೈಲಿಯಿಂದ ಮತ್ತು ಆಹಾರದ ವ್ಯವಸ್ಥೆಯಿಂದ ಹದಿ ಹರೆಯದ ಮಕ್ಕಳಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕಾರ್ಕಳ ಮಹಿಳಾ ಮೋರ್ಚಾದ ವತಿಯಿಂದ ದಿನಾಂಕ 23.06.2026 ರಂದು ಬೈಲೂರು ಪದವಿ ಪೂರ್ವ ಕಾಲೇಜಿನಲ್ಲಿ “ಆರೋಗ್ಯ ಪೂರ್ಣ ಆಹಾರ ಪದ್ಧತಿ“ ಬಗ್ಗೆ ಕಾರ್ಯಾಗಾರ ನಡೆಸಲಾಯಿತು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡುವ ಮೂಲಕ ಕಾರ್ಯಾಗಾರ ಆರಂಭಿಸಲಾಯಿತು.

ಸಮುದಾಯ ಕೇಂದ್ರದ ಆರೋಗ್ಯಾಧಿಕಾರಿ ತೇಜಸ್ವಿನಿ ಯವರು ಹಿಂದಿನ ಸಾಂಪ್ರದಾಯಿಕ ಆಹಾರ ಪದ್ಧತಿ ಮತ್ತು ಈಗಿನ ಆಹಾರ ಪದ್ಧತಿಯ ಬಗ್ಗೆ ಮತ್ತು ಸಮತೋಲಿತ ಆಹಾರ ಸೇವನೆ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಸಂಧ್ಯಾ ರಮೇಶ್ ಮಾತನಾಡಿ ಕೊಬ್ಬುಯುಕ್ತವಾದ ಅತಿಯಾದ ಎಣ್ಣೆ ಪದಾರ್ಥಗಳ ಬಳಕೆಗಿಂತ ಸೊಪ್ಪು ತರಕಾರಿ, ಮೊಳಕೆಕಾಳುಗಳಂತಹ ಆಹಾರಗಳ ಮಿತ ಬಳಕೆಯಿಂದ ಇಂಧನ ಉಳಿತಾಯ ಮತ್ತು ಆರೋಗ್ಯ ವರ್ಧನೆ ಮಾಡಿಕೊಳ್ಳಬಹುದಾಗಿದೆ.

ಪ್ರಧಾನಿಯವರ ಆತ್ಮ ನಿರ್ಭರ ಪರಿಕಲ್ಪನೆಯಡಿಯಲ್ಲಿ ಸ್ಥಳೀಯ ಆಹಾರ ಪದಾರ್ಥಗಳ ಬಳಕೆಯ ಬಗ್ಗೆ ಉಲ್ಲೇಖವಿದೆ ಎಂದರು. ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಸೀತಾರಾಮ್ ಭಟ್ ಮಾತನಾಡಿ ಕಾರ್ಯಾಗಾರದಲ್ಲಿ ಪಡೆದ ಮಾಹಿತಿಯನ್ನು ನಮ್ಮ ಮನೆಗಳಲ್ಲಿ ಮತ್ತು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತ ಜೀವನ ನಡೆಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ರವೀಂದ್ರ ಕುಮಾರ್ ರವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಮಾಲಿನಿ ಜೆ ಶೆಟ್ಟಿ, ಕಾರ್ಕಳ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ವಿನಯ ಡಿ ಬಂಗೇರಾ, ಜಿಲ್ಲಾ ಕಾರ್ಯದರ್ಶಿ ಶೋಭಾ ಭಾಸ್ಕರ್, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಉಷಾ ಜಯಪ್ರಕಾಶ್, ಲಕ್ಷ್ಮೀ ಮಂಜುನಾಥ್, ಕಾರ್ಯದರ್ಶಿ ಜ್ಯೋತಿ ರಮೇಶ್, ತಾಲೂಕು ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನುತಾ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ರತ್ನಾಕರ ಪೂಜಾರಿ ಸ್ವಾಗತಿಸಿ ವಿನಯ ಡಿ ಬಂಗೇರ ವಂದಿಸಿದರು. ತಾಲೂಕು ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಮಾ ರವಿಕಾಂತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಗಾರ ನಡೆಸಿಕೊಟ್ಟ ಆರೋಗ್ಯಾಧಿಕಾರಿ ತೇಜಸ್ವಿನಿ ಯವರನ್ನು ಫಲ ಪುಷ್ಪ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here