ಬೈಕಾಡಿಯಲ್ಲಿ ಕೋಳಿ ಅಂಕಕ್ಕೆ ಬ್ರಹ್ಮಾವರ ಪೊಲೀಸರ ದಾಳಿ; ಮೂವರು ಬಂಧನ

0
51

ಬ್ರಹ್ಮಾವರ : ತಾಲೂಕಿನ ಬೈಕಾಡಿ ಗ್ರಾಮದ ದೇವಸ್ಥಾನದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಬ್ರಹ್ಮಾವರ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಜುಲೈ 21ರಂದು ನಡೆದಿದೆ.

ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ) ಅಶೋಕ್ ಮಾಳಾಬಗಿ ಅವರು ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಬೈಕಾಡಿ ಗ್ರಾಮದ ಬೈಕಾಡ್ತಿ ಅಮ್ಮನವರ ದೇವಸ್ಥಾನದ ಎದುರು ಕೆಲವರು ಕೋಳಿಗಳ ಕಾಲಿಗೆ ಬಾಳ್ (ಕತ್ತಿ) ಕಟ್ಟಿ, ಹಿಂಸಾತ್ಮಕ ರೀತಿಯಲ್ಲಿ ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.

ಮಾಹಿತಿಯ ಆಧಾರದ ಮೇಲೆ ಪೊಲೀಸರು ತಕ್ಷಣ ಸ್ಥಳಕ್ಕೆ ದಾಳಿ ನಡೆಸಿದಾಗ, ಅಲ್ಲಿದ್ದ ಕೆಲವರು ಕೋಳಿಗಳನ್ನು ಹಿಡಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.

ದಾಳಿ ವೇಳೆ 6 ಕೋಳಿಗಳು, ಒಂದು ಬಾಳ್ (ಕತ್ತಿ), ಬಾಳ್ ಕಟ್ಟಲು ಬಳಸಿದ್ದ ಹಗ್ಗದ ತುಂಡು ಹಾಗೂ ಪಣಕ್ಕಿಟ್ಟಿದ್ದ ₹1,500 ನಗದು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 131/2026 ದಾಖಲಿಸಲಾಗಿದ್ದು, ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87, 93 ಹಾಗೂ ಮೃಗಹಿಂಸೆ ತಡೆ ಕಾಯ್ದೆ (Prevention of Cruelty to Animals Act) ಕಲಂ 11ರಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.