ಬೆಂಗಳೂರಿನ ಪೌರಕಾರ್ಮಿಕರಿಗಾಗಿ ಅಪೋಲೊ ಆಸ್ಪತ್ರೆಯಿಂದ ಸ್ತನ ಆರೋಗ್ಯ ತಪಾಸಣಾ ಶಿಬಿರ

0
9

ಮೂರು ದಿನಗಳ ಉಚಿತ ತಪಾಸಣಾ ಶಿಬಿರ – ನಗರದ ಸ್ವಚ್ಛತಾ ಕಾರ್ಯಕರ್ತೆಯರ ಆರೋಗ್ಯದ ಕಡೆಗೆ ಒಂದು ಹೆಜ್ಜೆ

ಬೆಂಗಳೂರು : ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ, ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯು ಜಿಬಿಎ ಪೌರಕಾರ್ಮಿಕರಿಗಾಗಿ ಮೂರು ದಿನಗಳ ಉಚಿತ ಸ್ತನ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. ಈ ಶಿಬಿರದಲ್ಲಿ ಸುಮಾರು 100 ಪೌರಕಾರ್ಮಿಕ ಮಹಿಳೆಯರಿಗೆ ತಪಾಸಣೆ ನಡೆಸಲಾಯಿತು.

ಶಿಬಿರದಲ್ಲಿ ರಕ್ತದೊತ್ತಡ, ವೈಟಲ್ಸ್, ರಕ್ತದಲ್ಲಿನ ಸಕ್ಕರೆ ಪ್ರಮಾಣ ಸೇರಿದಂತೆ ಅಗತ್ಯ ಆರೋಗ್ಯ ತಪಾಸಣೆಗಳನ್ನು ಮಾಡಲಾಯಿತು. ಜೊತೆಗೆ ಎಲ್ಲರಿಗೂ ಮ್ಯಾಮೊಗ್ರಫಿ ಸೇರಿದಂತೆ ಸ್ತನ ಆರೋಗ್ಯ ತಪಾಸಣೆ ನಡೆಸಿ, ತಜ್ಞ ವೈದ್ಯರಿಂದ ಸಮಾಲೋಚನೆ ನೀಡಲಾಯಿತು. ಅಗತ್ಯವಿರುವವರಿಗೆ ಮುಂದಿನ ಚಿಕಿತ್ಸೆ ಬಗ್ಗೆಯೂ ಮಾರ್ಗದರ್ಶನ ನೀಡಲಾಯಿತು.

ಅಪೋಲೊ ಹಾಸ್ಪಿಟಲ್ಸ್ ನ ಕರ್ನಾಟಕ ವಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಓಲೆಟಿ ಅವರು ಮಾತನಾಡಿ, “ಬೆಂಗಳೂರನ್ನು ಪ್ರತಿದಿನ ಸ್ವಚ್ಛವಾಗಿಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದು. ಅವರ ಸೇವೆಯನ್ನು ಗೌರವಿಸಿ, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಹೆಚ್ಚಿನ ತಪಾಸಣೆ ಅಗತ್ಯವಿರುವವರಿಗೆ ವೈಯಕ್ತಿಕವಾಗಿ ಸೂಕ್ತ ಮಾರ್ಗದರ್ಶನ ನೀಡಲಾಯಿತು ” ಎಂದರು.

ಮಾಜಿ ಶಾಸಕಿ ಮತ್ತು ಕಾಂಗ್ರೆಸ್ ನಾಯಕಿ ಸೌಮ್ಯಾ ರೆಡ್ಡಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, “ಪೌರಕಾರ್ಮಿಕರು ಬೆಂಗಳೂರಿನ ಬೆನ್ನೆಲುಬು. ಅವರ ಆರೋಗ್ಯವನ್ನು ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಅಪೋಲೊ ಆಸ್ಪತ್ರೆಯ ಈ ಕಾರ್ಯ ಶ್ಲಾಘನೀಯ. ಇಂತಹ ಶಿಬಿರಗಳು ಅಗತ್ಯವಿರುವವರಿಗೆ ನೇರವಾಗಿ ಆರೋಗ್ಯ ಸೇವೆ ತಲುಪಿಸಲು ಸಹಕಾರಿ. ಸ್ತನ ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಆರಂಭಿಕ ಪತ್ತೆ ಬಹಳ ಮುಖ್ಯ. ನಮ್ಮ ಪೌರಕಾರ್ಮಿಕ ಮಹಿಳೆಯರ ಆರೋಗ್ಯಕ್ಕೆ ಆದ್ಯತೆ ನೀಡುವ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತೋಷ ತಂದಿದೆ ಹಾಗೂ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ನಿಯಮಿತ ಆರೋಗ್ಯ ತಪಾಸಣೆಯನ್ನು ತಮ್ಮ ದಿನಚರಿಯ ಭಾಗವಾಗಿಸಿಕೊಳ್ಳಬೇಕು ಎಂದು ನಾನು ಕೋರುತ್ತೇನೆ ಎಂದರು.

ಅಪೋಲೊ ಆಸ್ಪತ್ರೆಯ ವೈದ್ಯಕೀಯ ತಂಡ ಮಾತನಾಡಿ, “ಸ್ತನ ಆರೋಗ್ಯ ತಪಾಸಣೆ ವ್ಯಕ್ತಿಯ ವಯಸ್ಸು, ರೋಗಲಕ್ಷಣಗಳು, ಕುಟುಂಬದ ಹಿನ್ನೆಲೆ ಮತ್ತು ಇತರ ಅಪಾಯಕಾರಿ ಅಂಶಗಳನ್ನು ಅವಲಂಬಿಸಿರುತ್ತದೆ. ಈ ಶಿಬಿರದಲ್ಲಿ ಎಲ್ಲರಿಗೂ ಮ್ಯಾಮೊಗ್ರಫಿ ತಪಾಸಣೆ ಮಾಡಿ, ವರದಿಗಳ ಆಧಾರದ ಮೇಲೆ ತಜ್ಞ ವೈದ್ಯರು ಸಮಾಲೋಚನೆ ನೀಡಿದ್ದಾರೆ” ಎಂದು ತಿಳಿಸಿದರು.

ಅಪೋಲೊ ಹಾಸ್ಪಿಟಲ್ಸ್ ಕುರಿತು ಡಾ. ಪ್ರತಾಪ್ ಸಿ. ರೆಡ್ಡಿ ಅವರು 1983ರಲ್ಲಿ ಚೆನ್ನೈನಲ್ಲಿ ಮೊದಲ ಆಸ್ಪತ್ರೆಯನ್ನು ಪ್ರಾರಂಭಿಸಿದರು. ಇಂದು, ಅಪೋಲೊ ವಿಶ್ವದ ಅತ್ಯಂತ ದೊಡ್ಡ ಸಂಯೋಜಿತ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಒಂದಾಗಿದೆ. ಇದು 26ಆಸ್ಪತ್ರೆಗಳಲ್ಲಿ 10,400 ಕ್ಕೂ ಹೆಚ್ಚು ಹಾಸಿಗೆಗಳು 6,800 ಕ್ಕೂ ಹೆಚ್ಚು ಫಾರ್ಮಸಿಗಳು, 2,9000 ಕ್ಕೂ ಹೆಚ್ಚು ಕ್ಲಿನಿಕ್‌ಗಳು ಮತ್ತು 500 ಕ್ಕೂ ಹೆಚ್ಚು ಟೆಲಿಮೆಡಿಸಿನ್ ಕೇಂದ್ರಗಳನ್ನು ಹೊಂದಿದೆ. ಹೃದ್ರೋಗ ವಿಜ್ಞಾನ ವಿಭಾಗದಲ್ಲಿ, ಅಪೋಲೊ 3,00,000 ಕ್ಕೂ ಹೆಚ್ಚು ಆಂಜಿಯೋಪ್ಲಾಸ್ಟಿಗಳು ಮತ್ತು 5,00,000 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ನಡೆಸಿದೆ. ರೋಗಿಗಳಿಗೆ ಗುಣಮಟ್ಟದ ಆರೈಕೆ ದೊರೆಯುವಂತೆ ಮಾಡಲು ಅಪೋಲೊ ನವೀನ ತಂತ್ರಜ್ಞಾನಗಳು, ಉಪಕರಣಗಳು ಮತ್ತು ಚಿಕಿತ್ಸಾ ವಿಧಾನಗಳನ್ನು ತರಲು ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿ ನಿರಂತರ ಹೂಡಿಕೆ ಮಾಡುತ್ತಿದೆ. ಅಪೋಲೊದ 1,20,000 ಕುಟುಂಬ ಸದಸ್ಯರು ರೋಗಿಗಳಿಗೆ ಅತ್ಯುತ್ತಮ ಆರೈಕೆಯನ್ನು ನೀಡಲು ಮತ್ತು ಜಗತ್ತನ್ನು ಮತ್ತಷ್ಟು ಉತ್ತಮಗೊಳಿಸಲು ಸಮರ್ಪಿತರಾಗಿದ್ದಾರೆ.