ಕೀರ್ತಿಶೇಷ ಇರ್ವತ್ತೂರು ಅನಂತ ಭಟ್ಟರ ಸಂಸ್ಮರಣೆ : ಔಷಧೀಯ ಸಸ್ಯ, ತರಕಾರೀ ಬೀಜ, ಗೋಕ್ರಪಾಮ್ರತ ಉಚಿತ ವಿತರಣೆ

0
25

ಮಣ್ಣಿನ ಫಲವತ್ತತೆಯಿಂದ ಆರೋಗ್ಯಕರ ಸಮಾಜ ನಿರ್ಮಾಣ — ಪಡುಮಾರ್ನಾಡು ದಯಾನಂದ ಪೈ

ಮೂಡುಬಿದಿರೆ : ತಮ್ಮ ಜೀವನದುದ್ದಕ್ಕೂ ಔಷಧೀಯ ಗುಣಗಳುಳ್ಳ ಸಸ್ಯಗಳನ್ನು ಪೋಷಿಸಿ, ಬೆಳೆಸಿ ಉಳಿಸಿದ್ದಲ್ಲದೆ ಸಸ್ಯ ಸಂಪತ್ತು ಮತ್ತು ಸಾವಯವ ತರಕಾರಿ ಬೆಳೆಸುವಿಕೆಗೆ ಆಗಾಧ ಪರಿಶ್ರಮ ಹಾಕಿ ತನ್ನದೇ ವಿಶಿಷ್ಟ ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಿರುವ ಕೀರ್ತಿಶೇಷ ಸ್ವರ್ಗೀಯ ಅನಂತ ಭಟ್ಟರ ಕಾಯಕ,ಹೆಸರು ಶಾಶ್ವತವಾಗಿ ಉಳಿದಿರುವುದಕ್ಕೆ ಆವರಿಂದ ಮಾರ್ಗದರ್ಶನ,ಜ್ಞಾನ ಗಳಿಸಿರುವ ಇಂದಿನ ಸಾವಯವ ಕೃಷಿ ಬಳಗದವರು ನಡೆಸುತ್ತಿರುವ ಅವರ ಸಂಸ್ಮರಣಾ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದು ಜಿಲ್ಲಾ ಹಿರಿಯ ಸಹಕಾರೀ ಧುರೀಣರೂ ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ ಆದ ಎಂ ದಯಾನಂದ ಪೈ ಯವರು ಹೇಳಿದರು.

ಇಲ್ಲಿನ ಅಲಂಗಾರು ಜನತಾ ವಿವಿದುದ್ದೇಶ ಸಹಕಾರೀ ಸಂಘದ ವಠಾರದಲ್ಲಿ ಅಮೃತ ಸಾವಯವ ಮಳಿಗೆ ಮತ್ತು ಸಾವಯವ ಕೃಷಿಕರ ಬಳಗ ಮೂಡುಬಿದಿರೆ ಆಶ್ರಯದಲ್ಲಿ ನಡೆದ ಸ್ವರ್ಗೀಯ ಇರುವೈಲು ಅನಂತ ಭಟ್ಟರ ಸಂಸ್ಮರಣಾ ಕಾರ್ಯಕ್ರಮವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿದ್ದಲ್ಲದೇ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾವಯವ ಕೃಷಿಯನ್ನು ಬೆಂಬಲಿಸುವ ದ್ರಷ್ಟಿಯಿಂದ ಮುಂದಿನ ದಿನಗಳಲ್ಲಿ ಮೂಡುಬಿದಿರಿಯಲ್ಲಿ ಜಿಲ್ಲಾ ಮಟ್ಟದ ಸ್ವಾವಲಂಬೀ ಸಾವಯವ ಕೃಷಿ ಮೇಳವನ್ನು ನಡೆಸುವ ಉದ್ದೇಶವನ್ನಿಟ್ಟುಕೊಂಡಿದ್ದು, ಫಲವತ್ತಾದ ಮಣ್ಣಿನಿಂದ ಫಲವತ್ತಾದ ಬೆಳೆ, ಫಲವತ್ತಾದ ಬೆಳೆಯಿಂದ ಆರೋಗ್ಯಕರ ಸಮಾಜ ನಿರ್ಮಾಣ,ಈ ನಿಟ್ಟಿನಲ್ಲಿ ಸಾವಯವ ಕೃಷಿಕರ ಮತ್ತು ಗ್ರಾಹಕರ ಸಹಕಾರವನ್ನು ಅವರು ಈ ಸಂದರ್ಭದಲ್ಲಿ ಕೋರಿದರು.ಪ್ರಗತಿಪರ ಸಾವಯವ ಕೃಷಿಕರಾದ ಪಡುಮಾರ್ನಾಡು ದಯಾನಂದ ಭಟ್, ಜಿನೇಂದ್ರ ಹೆಗ್ಡೆ, ಅಮೃತ ಸಾವಯವ ಮಳಿಗೆಯಲ್ಲಿ ಅಶೋಕ್ ಭಂಡಾರಿ,ಇರ್ವತ್ತೂರು ವೆಂಕಟರಮಣ ಭಟ್ ಮೂಡುಬಿದಿರೆಯ ವಾಸ್ತು ತಜ್ಞ ಎಂ ರಾಘವೇಂದ್ರ ಭಂಡಾರ್ಕರ್ ಅವರು ಕೀರ್ತಿಶೇಷ ಅನಂತ ಭಟ್ಟರ ಸಂಸ್ಮರಣೆ ಮತ್ತು ಸಾವಯವ ಕೃಷಿಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಗೊಪೂಜೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯ್ತು. ವಿವಿಧ ಔಷಧೀಯ ಸಸ್ಯಾಗಳಾದ ಪುನರ್ನವ, ಕಪ್ಪಲ್ ಶುಂಠಿ, ಶಂಖ ಪುಷ್ಪ, ಆನೆ ಸೋಗೆ ಮಜ್ಜಿಗೆ ಸೊಪ್ಪು, ಮಹಾರಸ ನಾಂದಿ, ಆರಾರೂಟು, ಕ್ರಷ್ಣ ತುಳಸಿ ಮುಂತಾದ ನೂರಕ್ಕೂ ಹೆಚ್ಚಿನ ಔಷಧೀಯ ಗಿಡಗಳ ಬಗ್ಗೆ ಸ್ವರ್ಗೀಯ ಇರ್ವತ್ತೂರು ಅನಂತ ಭಟ್ಟರ ಸುಪುತ್ರ ವೆಂಕಟರಮಣ ಭಟ್ಟರು ಪರಿಚಯ ನೀಡಿದರು.

ನಂತರ ವಿವಿಧ ಔಷಧೀಯ ಸಸಿಗಳು, ತರಕಾರೀ ಬೀಜಗಳು, ಗೋಕ್ರಪಾಮ್ರತವನ್ನು ಸಾವಯವ ಕೃಷಿಕರಿಗೆ ಮತ್ತು ಗ್ರಾಹಕರಿಗೆ ಉಚಿತವಾಗಿ ವಿತರಿಸಲಾಯ್ತು.ನಂತರ ಬೆಂಗಳೂರು ರವಿಶಂಕರ್ ಗುರೂಜಿಯವರ ಆರ್ಟ್ಸ್ ಆಫ್ ಲಿವಿಂಗ್ ಕೇಂದ್ರದ ಶಿಕ್ಷಕ ಉದಯರವರು ಗೋ ಆಧಾರಿತ ಕೃಷಿಯ ಬಗ್ಗೆ ಮಾಹಿತಿ ನೀಡಿದರು.ಪ್ರಾರಂಭದಲ್ಲಿ ಕಾರ್ಯಕ್ರಮವನ್ನು ಅಶೋಕ ಭಂಡಾರಿಯವರು ಪ್ರಾಸ್ತಾವಿಕಾವಾಗಿ ಮಾತನಾಡಿ ಸ್ವಾಗತಿಸಿದರು. ಪಡುಮಾರ್ನಾಡು ದಯಾನಂದ ಭಟ್ಟರು ಪ್ರಾರ್ಥನೆ ಹಾಡಿ ಕಾರ್ಯಕ್ರಮ ನಿರ್ವಹಿಸಿದರು. ಪೆರಿಂಜೆಯ ಗೋಪಾಲಕ್ರಷ್ಣ ಭಟ್ ವಂದಿಸಿದರು.ಮೂಡುಬಿದಿರೆ ತಾಲೂಕಿನ 50ಕ್ಕೂ ಹೆಚ್ಚಿನ ಸಾವಯವ ರೈತರು ಹಾಜರಿದ್ದು ತಮ್ಮ ಅನುಭವವನ್ನು ಹಂಚಿಕೊಂಡರು.

LEAVE A REPLY

Please enter your comment!
Please enter your name here