SGB ಹೂಡಿಕೆದಾರರಿಗೆ ಬಂಪರ್ ಲಾಭ ! ಖಾತೆಗೆ ಕೋಟಿ ಕೋಟಿ ಹಣ..!

0
32

ನವದೆಹಲಿ : ಕೇಂದ್ರ ಸರ್ಕಾರದ ಸಾವರೀನ್ ಗೋಲ್ಡ್ ಬಾಂಡ್ (SGB) ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಭರ್ಜರಿ ಲಾಭ ದೊರೆತಿದ್ದು, 2019-20ನೇ ಸಾಲಿನ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದವರಿಗೆ ಇದೀಗ ಶೇ.300ಕ್ಕೂ ಅಧಿಕ ಆದಾಯ ಸಿಕ್ಕಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬಾಂಡ್‌ಗಳ ಅವಧಿಪೂರ್ವ ಮರುಪಾವತಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಭಾರೀ ಲಾಭ ಪಡೆಯುತ್ತಿದ್ದಾರೆ.

2019ರ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಸೀರೀಸ್-7 ಸಾವರೀನ್ ಗೋಲ್ಡ್ ಬಾಂಡ್‌ನ ಪ್ರತಿ ಗ್ರಾಂ ಬೆಲೆ 3,745 ರೂಪಾಯಿಯಾಗಿತ್ತು. ಆನ್‌ಲೈನ್ ಮೂಲಕ ಖರೀದಿಸಿದವರಿಗೆ 3,695 ರೂಪಾಯಿಗೆ ಲಭ್ಯವಾಗಿತ್ತು. ಇದೀಗ ಆರ್‌ಬಿಐ ನಿಗದಿಪಡಿಸಿರುವ ಮರುಪಾವತಿ ದರ ಪ್ರತಿ ಗ್ರಾಂಗೆ 15,275 ರೂಪಾಯಿಗೆ ಏರಿಕೆಯಾಗಿದೆ.

ಇದರ ಪರಿಣಾಮವಾಗಿ ಸಾಮಾನ್ಯ ಹೂಡಿಕೆದಾರರಿಗೆ ಶೇ.307.87ರಷ್ಟು ಲಾಭ ದೊರೆತಿದ್ದು, ಆನ್‌ಲೈನ್ ರಿಯಾಯಿತಿ ದರದಲ್ಲಿ ಖರೀದಿಸಿದವರಿಗೆ ಶೇ.313.39ರಷ್ಟು ಆದಾಯ ಸಿಕ್ಕಂತಾಗಿದೆ.

4 ಕೆಜಿ ಹೂಡಿಕೆಗೆ 4.85 ಕೋಟಿ ರೂ. ಲಾಭ!

ಒಬ್ಬ ಹೂಡಿಕೆದಾರರು ಗರಿಷ್ಠ ಮಿತಿಯಾದ 4,000 ಗ್ರಾಂ (4 ಕೆಜಿ) ಚಿನ್ನದ ಬಾಂಡ್ ಖರೀದಿಸಿದ್ದರೆ, 2019ರಲ್ಲಿ ಸುಮಾರು 1.47 ಕೋಟಿ ರೂಪಾಯಿ ಹೂಡಿಕೆ ಮಾಡಬೇಕಾಗಿತ್ತು. ಈಗ ಅದೇ ಹೂಡಿಕೆಯ ಮೌಲ್ಯ 6.11 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಅಂದರೆ, ಚಿನ್ನದ ಬೆಲೆ ಏರಿಕೆಯಿಂದಲೇ ಸುಮಾರು 4.63 ಕೋಟಿ ರೂಪಾಯಿ ಲಾಭ ಸಿಕ್ಕಿದ್ದು, ಇದರ ಜೊತೆಗೆ ವಾರ್ಷಿಕ ಶೇ.2.5ರ ಬಡ್ಡಿಯನ್ನೂ ಪಡೆದಿದ್ದಾರೆ. ಬಡ್ಡಿ ಮೊತ್ತ ಸೇರಿಸಿದರೆ ಒಟ್ಟು ಲಾಭ ಸುಮಾರು 4.85 ಕೋಟಿ ರೂಪಾಯಿಗೆ ತಲುಪಿದೆ.

ಮರುಪಾವತಿ ಬೆಲೆ ಹೇಗೆ ನಿಗದಿ?

ಜೂನ್ 5, 8 ಮತ್ತು 9ರಂದು ಪ್ರಕಟವಾದ ಚಿನ್ನದ ಸರಾಸರಿ ಮಾರುಕಟ್ಟೆ ಬೆಲೆಯನ್ನು ಆಧರಿಸಿ ಮರುಪಾವತಿ ದರ ನಿಗದಿಪಡಿಸಲಾಗಿದೆ. ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಪ್ರಕಟಿಸಿದ ದರವನ್ನು ಲೆಕ್ಕಾಚಾರಕ್ಕೆ ಬಳಸಲಾಗಿದೆ.

ತೆರಿಗೆ ನಿಯಮ ಏನು?

SGB ಯೋಜನೆಯಲ್ಲಿ ಚಿನ್ನದ ಬೆಲೆ ಏರಿಕೆಯಿಂದ ಸಿಗುವ ಬಂಡವಾಳ ಲಾಭಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಆದರೆ ವರ್ಷಕ್ಕೆ ಸಿಗುವ ಶೇ.2.5ರಷ್ಟು ಬಡ್ಡಿ ಆದಾಯಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ.

ಹೊಸ SGB ಯೋಜನೆ ಯಾಕೆ ಸ್ಥಗಿತ?

ದೇಶದ ಚಿನ್ನದ ಆಮದು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ 2015ರಲ್ಲಿ ಸಾವರೀನ್ ಗೋಲ್ಡ್ ಬಾಂಡ್ ಯೋಜನೆ ಆರಂಭಿಸಿತ್ತು. ಆದರೆ ಸರ್ಕಾರದ ಮೇಲಿನ ವೆಚ್ಚ ಹೆಚ್ಚಾಗಿದ್ದ ಕಾರಣ 2023ರ ಅಕ್ಟೋಬರ್‌ನಿಂದ ಹೊಸ ಬಾಂಡ್‌ಗಳ ಬಿಡುಗಡೆ ನಿಲ್ಲಿಸಲಾಗಿದೆ. ಆದರೂ ಈಗಾಗಲೇ ಬಾಂಡ್ ಹೊಂದಿರುವ ಹೂಡಿಕೆದಾರರಿಗೆ ಎಲ್ಲಾ ಸೌಲಭ್ಯಗಳು ಮುಂದುವರಿಯಲಿವೆ.

LEAVE A REPLY

Please enter your comment!
Please enter your name here