ಮಧ್ಯರಾತ್ರಿ ರಸ್ತೆಗಿಳಿದ ಯುವತಿಯರು; ಲೇಡೀಸ್ ಪಿಜಿಯಲ್ಲಿ ಭಾರೀ ಹೈಡ್ರಾಮಾ..!

0
33

ಬೆಂಗಳೂರು : ಆಹಾರದ ಗುಣಮಟ್ಟ ಕಳಪೆಯಾಗಿದ್ದು, ಸುರಕ್ಷತೆಯೂ ಇಲ್ಲ ಎಂದು ಆರೋಪಿಸಿ ಮಹಿಳಾ ಪಿಜಿಯ ನಿವಾಸಿಗಳು ಮಧ್ಯರಾತ್ರಿಯೇ ರಸ್ತೆಗಿಳಿದು ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವನಗರದಲ್ಲಿರುವ ಅಂಜನಾದ್ರಿ ಲೇಡೀಸ್ ಪಿಜಿಯಲ್ಲಿ ನಡೆದಿದೆ.

ಪಿಜಿಯಲ್ಲಿ ನೀಡಲಾಗುತ್ತಿದ್ದ ಆಹಾರದಲ್ಲಿ ಪದೇಪದೆ ಹುಳು, ಕಸ-ಕಡ್ಡಿಗಳು ಪತ್ತೆಯಾಗುತ್ತಿದ್ದವು ಎಂದು ಯುವತಿಯರು ಆರೋಪಿಸಿದ್ದಾರೆ. ಈ ಕುರಿತು ಹಲವು ಬಾರಿ ದೂರು ನೀಡಿದರೂ ಪಿಜಿ ಆಡಳಿತ ನಿರ್ಲಕ್ಷ್ಯ ತೋರಿದ್ದು, “ಕೊಟ್ಟಿದ್ದು ತಿನ್ನಿ, ಇಲ್ಲದಿದ್ದರೆ ಪಿಜಿ ಖಾಲಿ ಮಾಡಿ” ಎಂದು ಉತ್ತರ ನೀಡಲಾಗಿದೆ ಎಂದು ಅವರು ದೂರಿದ್ದಾರೆ.

ಇದರಿಂದ ಆಕ್ರೋಶಗೊಂಡ ಯುವತಿಯರು ನ್ಯಾಯಕ್ಕಾಗಿ ಮಧ್ಯರಾತ್ರಿಯೇ ಪಿಜಿಯಿಂದ ಹೊರಬಂದು ರಸ್ತೆಗಿಳಿದು ಪ್ರತಿಭಟನೆ ನಡೆಸಿ ಪಿಜಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸುರಕ್ಷತೆಗೂ ಧಕ್ಕೆ ಆರೋಪ

ಪಿಜಿಯನ್ನು ನಿರ್ವಹಿಸುತ್ತಿರುವ ಮಹಿಳೆಯ ಮಗ ರಾತ್ರಿ ವೇಳೆ ಯಾವುದೇ ಅನುಮತಿ ಇಲ್ಲದೆ ಪಿಜಿ ಆವರಣ ಹಾಗೂ ಕೊಠಡಿಗಳ ಬಳಿ ಓಡಾಡುತ್ತಿದ್ದಾನೆ ಎಂದು ಯುವತಿಯರು ಗಂಭೀರ ಆರೋಪ ಮಾಡಿದ್ದಾರೆ. ಕೆಲವೊಮ್ಮೆ ಅನುಮತಿ ಪಡೆಯದೆ ಕೊಠಡಿಗಳ ಬಳಿ ಬರುತ್ತಿದ್ದ ಹಾಗೂ ಟೆರಸ್‌ನ ಲೈಟ್‌ಗಳನ್ನು ಆಫ್ ಮಾಡುತ್ತಿದ್ದ ಎಂದು ದೂರಿದ್ದಾರೆ.

ಈ ಬಗ್ಗೆ ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ಆರೋಪಿಸಿರುವ ಯುವತಿಯರು, “ಈ ಪಿಜಿಯಲ್ಲಿ ಆಹಾರದ ಗುಣಮಟ್ಟವೂ ಇಲ್ಲ, ಸುರಕ್ಷತೆಯ ಭರವಸೆಯೂ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರೋಪ ತಳ್ಳಿಹಾಕಿದ ಪಿಜಿ ಮಾಲಕಿ

ಯುವತಿಯರ ಆರೋಪಗಳನ್ನು ಪಿಜಿ ಮಾಲಕಿ ತಳ್ಳಿಹಾಕಿದ್ದು, “ಆ ರೀತಿಯ ಯಾವುದೇ ಘಟನೆ ನಡೆದಿಲ್ಲ. ಉಂಟಾಗಿರುವ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಕಟ್ಟಡ ಮಾಲೀಕರಿಂದ ತರಾಟೆ

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕಟ್ಟಡದ ಮಾಲೀಕರು, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದು ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಇದೇ ವೇಳೆ ಪಿಜಿ ನಿರ್ವಹಣೆ ಮಾಡುತ್ತಿರುವ ತಾಯಿ-ಮಗನ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಪೊಲೀಸರ ಮಧ್ಯಪ್ರವೇಶ

ಸ್ಥಳಕ್ಕೆ ಆಗಮಿಸಿದ ಬಸವೇಶ್ವರನಗರ ಪೊಲೀಸರು ಎರಡೂ ಪಕ್ಷಗಳ ವಾದ ಆಲಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸದ್ಯ ಈ ಘಟನೆ ಸ್ಥಳೀಯರಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here